ನವದೆಹಲಿ: ಸಿಖ್ಖರು ಧರಿಸುವ ಪೇಟ ಹಾಗೂ ಕೃಪಾಣ (ಸಿಖ್ಖರು ಇಟ್ಟುಕೊಳ್ಳುವ ಸಾಂಪ್ರದಾಯಿಕ ಸಣ್ಣ ಕತ್ತಿ) ಜತೆ ಹಿಜಾಬ್‌ಅನ್ನು (Hijab Row) ಹೋಲಿಸುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದುನ್ನು ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯ ಮೂರನೇ ದಿನವಾದ ಗುರುವಾರ ಹೋಲಿಕೆ ಸರಿಯಲ್ಲ ಎಂದಿದೆ.
“ಸಿಖ್ಖರು ಧರಿಸುವ ಪೇಟ ಹಾಗೂ ಕೃಪಾಣಗಳು ಆ ಧರ್ಮದ ಐದು ಕಡ್ಡಾಯ ಅಂಶಗಳ ಭಾಗವಾಗಿದೆ. ಇದಕ್ಕೆ ಸುಪ್ರೀಂ ಕೋರ್ಟ್ ಮಾನ್ಯತೆ ನೀಡಿದೆ. ಹಾಗಾಗಿ, ಆ ಧರ್ಮೀಯರ ಟರ್ಬನ್ ಹಾಗೂ ಕೃಪಾಣದ ಜತೆ ಹೋಲಿಸುವುದು ಸಮಂಜಸವಲ್ಲ” ಎಂದು ನ್ಯಾ.ಹೇಮಂತ್ ಗುಪ್ತಾ ನೇತೃತ್ವದ ಪೀಠ ತಿಳಿಸಿದೆ. ಅರ್ಜಿದಾರರ ಪರ ವಾದ ಮಂಡಿಸಿದ ನಿಜಾಮ್ ಪಾಷಾ, “ಸಿಖ್ಖರಿಗೆ ಕೃಪಾಣ ಹಾಗೂ ಪೇಟ ಹೇಗೋ, ಅದೇ ರೀತಿ ಮುಸ್ಲಿಂ ಮಹಿಳೆಯರಿಗೆ ಹಿಜಾಬ್” ಎಂದರು. ಆಗ ನ್ಯಾಯಾಲಯವು ಈ ರೀತಿಯ ಹೋಲಿಕೆ ಬೇಡ ಎಂದಿತು.
“ಸಿಖ್ ಧರ್ಮವು ಭಾರತದ ಸಂಸ್ಕೃತಿಯಲ್ಲಿ ಮೇಳೈಸಿದೆ. ಅವರ ಧಾರ್ಮಿಕ ಆಚರಣೆಗಳನ್ನು ಸಂವಿಧಾನವೇ ಮಾನ್ಯ ಮಾಡಿದೆ. ಅಷ್ಟಕ್ಕೂ, ನಮಗೆ ಫ್ರಾನ್ಸ್ ಹಾಗೂ ಆಸ್ಟ್ರಿಯಾದ ಉದಾಹರಣೆಗಳು ಬೇಕಿಲ್ಲ. ಅಲ್ಲಿನ ಆಚರಣೆಗಳಿಗೂ ನಮ್ಮ ಆಚರಣೆಗಳಿಗೂ ಹೋಲಿಕೆ ಮಾಡುವುದು ಸಮಂಜಸ ಎನಿಸುವುದಿಲ್ಲ” ಎಂದು ಸ್ಪಷ್ಟಪಡಿಸಿತು.
ಕರ್ನಾಟಕದಲ್ಲಿ ವರ್ಷದ ಆರಂಭದಲ್ಲಿ ಉಂಟಾದ ಹಿಜಾಬ್ ವಿವಾದವು ದೇಶಾದ್ಯಂತ ಸುದ್ದಿಯಾಗಿದೆ. ಕರ್ನಾಟಕವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿದ ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿದೆ. ಕರ್ನಾಟಕ ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದ್ದು, ಇದನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿವೆ. ಇವುಗಳ ಕುರಿತು ಮೂರು ದಿನದಿಂದ ಸರ್ವೋಚ್ಚ ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ.
ಇದನ್ನೂ ಓದಿ | ಹಿಜಾಬ್ ವಿವಾದ: ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದ ಸುಪ್ರೀಂ, ಅರ್ಜಿದಾರರಿಗೆ ತೀವ್ರ ತರಾಟೆ