ನವದೆಹಲಿ: ಕೇಂದ್ರ ಸರ್ಕಾರವು ಸಿಬಿಐ ಮತ್ತು ಇ.ಡಿ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ವ್ಯಾಪಕ ಆರೋಪ ಕೇಳಿ ಬರುತ್ತಿರುವ ಹೊತ್ತಿನಲ್ಲೇ, ಜಾರಿ ನಿರ್ದೇಶನಾಲಯ(Enforcement Directorate)ವು ಭಯದ ವಾತಾವರಣವನ್ನು ಸೃಷ್ಟಿಸಬಾರದು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿರುವುದು ಮಹತ್ವವನ್ನು ಪಡೆದುಕೊಂಡಿದೆ. ಸಾರಾಯಿ ಅಕ್ರಮ ಪ್ರಕರಣಗಳಲ್ಲಿ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಅವರನ್ನು ಹೆಸರಿಸುವಂತೆ ಇ.ಡಿ ತಮಗೆ ಒತ್ತಡ ಹೇರಿ, ಬೆದರಿಕೆ ಹಾಕುತ್ತಿದೆ ಎಂದು ಛತ್ತೀಸ್‌ಗಢದ(Chhattisgarh Government) ಅಬಕಾರಿ ಇಲಾಖೆಯ ಅಧಿಕಾರಿಗಳು ದೂರಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್(Supreme Court), ಭಯದ ವಾತಾವರಣವನ್ನು ನಿರ್ಮಿಸಬಾರದು ಎಂದು ಇ.ಡಿ.ಗೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್ ಮತ್ತು ಎ ಅಮನುಲ್ಲಾ ಅವರಿದ್ದ ಪೀಠವು ಈ ನಿರ್ದೇಶನ ನೀಡಿದೆ. ಛತ್ತೀಸ್‌ಗಢ ಸರ್ಕಾರವು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವಾಗ ನಡೆಯುತ್ತಿರುವ ಅರ್ಜಿಗಳಲ್ಲಿ ಕಕ್ಷಿದಾರರನ್ನಾಗಿ ಮಾಡುವಂತೆ ನ್ಯಾಯಾಲಯವನ್ನು ಕೋರಿದೆ. ವಿಎಂಜೆಡ್ ಚೇಂಬರ್ಸ್ ಮೂಲಕ ಛತ್ತೀಸ್‌ಗಢ ಸರ್ಕಾರವು, ರಾಜ್ಯವನ್ನು ಪ್ರತಿವಾದಿಯನ್ನಾಗಿ ಸೂಚಿಸಲು ಅನುಮತಿ ನೀಡಲು ಅರ್ಜಿಯನ್ನು ಸಲ್ಲಿಸಿದೆ.
ಅಕ್ರಮಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯನ್ನು ಸಿಲುಕಿಸಲು ಇ.ಡಿ ಪ್ರಯತ್ನಿಸುತ್ತಿದೆ. ಈ ಸಂಬಂಧ ಹಲವು ರಾಜ್ಯಗಳ ಅಬಕಾರಿ ಇಳಾಖೆಯ ಅಧಿಕಾರಿಗಳು ಮತ್ತು ಅವರ ಕುಟುಂಬದ ಸದಸ್ಯರನ್ನು ಬಂಧಿಸುವ ಬೆದರಿಕೆಯನ್ನು ಹಾಕುತ್ತಿದೆ ಎಂದು ಛತ್ತೀಸ್‌ಗಢ ಸರ್ಕಾರವು ಜಾರಿ ನಿರ್ದೇಶನಾಲಯದ ವಿರುದ್ಧ ಆರೋಪ ಮಾಡಿದೆ.
ಸರ್ಕಾರದ ಪರವಾಗಿ ವಾದ ಮಂಡಿಸಿದ ಕಪಿಲ್ ಸಿಬಲ್ ಅವರು, ಜಾರಿ ನಿರ್ದೇಶನಾಲಯವು ಅವ್ಯವಹಾರವನ್ನು ನಡೆಸುತ್ತಿದೆ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಲಿಗ ಧಮ್ಕಿ ಹಾಕುತ್ತಿದೆ. ಈ ನಡೆಯು ಆಘತಕಾರಿಯ ಸ್ಥಿತಿಯಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಆದರೆ, ಇ.ಡಿ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರು, ಛತ್ತೀಸ್‌ಗಢ ಸರ್ಕಾರ ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿದರು. ತನಿಖಾ ಸಂಸ್ಥೆಯು ಕೇವಲ ಅಕ್ರಮ ವ್ಯವಹಾರಗಳ ಕುರಿತು ತನಿಖೆಯನ್ನು ಮಾತ್ರವೇ ನಡೆಸುತ್ತಿದೆ ಎಂದು ಹೇಳಿದರು. ಆಗ ನ್ಯಾಯಲಯವು, ಅಬಕಾರಿ ಇಲಾಖೆಗಳ ಅಧಿಕಾರಿಗಳ ಮಧ್ಯೆ ಭಯದ ವಾತಾವರಣ ಮೂಡಿಸಬಾರದು. ಇಂಥ ನಡವಳಿಕೆಯು ವಿಶ್ವಾಸರ್ಹತೆಯು ಶಂಕಾಸ್ಪದವಾಗಿ ಮಾರ್ಪಾಡುತ್ತದೆ ಎಂದು ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.