ನವದೆಹಲಿ: ‘ನನ್ನನ್ನು ಬಂಧಿಸಲು ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ED) ಸಜ್ಜಾಗಿ ನಿಂತಿದ್ದಾರೆ’ ಎಂಬುದಾಗಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಆತಂಕ ವ್ಯಕ್ತಪಡಿಸಿದ್ದಾರೆ. ಸಂಸತ್‌ನಲ್ಲಿ ಮಾಡಿದ ಚಕ್ರವ್ಯೂಹದ ಹೇಳಿಕೆಯ ಬಳಿಕ ನನ್ನನ್ನು ಬಂಧಿಸಲು ಸಿದ್ಧತೆ ನಡೆಸಿದೆ ಎಂಬುದಾಗಿ ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದರು. ಇದಕ್ಕೆ ಕಾಂಗ್ರೆಸ್ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ (Abhishek Manu Singhvi) ಪ್ರತಿಕ್ರಿಯಿಸಿದ್ದು, “ರಾಹುಲ್ ಗಾಂಧಿ ಅವರನ್ನು ಬಂಧಿಸಿದರೆ ಬಿಜೆಪಿಯು ಶವಪೆಟ್ಟಿಗೆ ಸೇರುತ್ತದೆ” ಎಂದು ಪೋಸ್ಟ್ ಮಾಡಿದ್ದಾರೆ.
“ರಾಹುಲ್ ಗಾಂಧಿ ಅವರನ್ನು ಇ.ಡಿ ಬಂಧಿಸುವುದು ಬಿಡಿ, ಬಂಧಿಸುವ ಕುರಿತು ಯೋಚನೆ ಮಾಡಿದರೂ ದೇಶದ ಜನ ಬಿಜೆಪಿಯ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯಲಿದ್ದಾರೆ. ರಾಹುಲ್ ಗಾಂಧಿ ಅವರನ್ನು ಬಂಧಿಸುವ ಕುರಿತು ಯೋಚನೆಯನ್ನೂ ಮಾಡದಿರಿ. ಎಂದಿಗೂ ಯೋಚನೆ ಮಾಡದಿರಿ” ಎಂದು ಅಭಿಷೇಕ್ ಮನು ಸಿಂಘ್ವಿ ಎಚ್ಚರಿಸಿದ್ದಾರೆ. “ನಾನು ಸಂಸತ್‌ನಲ್ಲಿ ಚಕ್ರವ್ಯೂಹದ ಕುರಿತು ಭಾಷಣ ಮಾಡಿದ ಬಳಿಕ ಇ.ಡಿ ನನ್ನನ್ನು ಬಂಧಿಸಲು ಸಿದ್ಧತೆ ನಡೆಸುತ್ತಿದೆ. ಇ.ಡಿಯ ಮೂಲಗಳೇ ಇದರ ಕುರಿತು ಮಾಹಿತಿ ನೀಡಿವೆ” ಎಂದು ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದರು.
If ED even thinks of arresting RaGa, the nation shall strike the final nail in BJP's coffin! Don't ever think of this. Never ever..
— Abhishek Singhvi (@DrAMSinghvi) August 3, 2024
ಸಂಸತ್‌ನಲ್ಲಿ ರಾಹುಲ್ ಗಾಂಧಿ ಏನು ಹೇಳಿದ್ದರು.
ಸಂಸತ್‌ನಲ್ಲಿ ಜುಲೈ 29ರಂದು ರಾಹುಲ್ ಗಾಂಧಿ ಅವರು ಕೇಂದ್ರದ ವಿರುದ್ಧ ಹರಿಹಾಯ್ದಿದ್ದರು. ದೇಶದ ಜನರ ಸುತ್ತ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೆಣೆದ ಚಕ್ರವ್ಯೂಹವನ್ನು ನಾವು ಭೇದಿಸುತ್ತೇವೆ. ಚಕ್ರವ್ಯೂಹವನ್ನು ನಮಗೆ ಭೇದಿಸುವುದು ಗೊತ್ತಿದೆ. ಯಾವ ಜಾತಿಗಣತಿ ಎಂದರೆ ನೀವು (ಬಿಜೆಪಿ) ಹೆದರುತ್ತೀರೋ, ಅದೇ ಜಾತಿಗಣತಿಯನ್ನು ಇದೇ ಸದನದಲ್ಲಿ ನಾವು ಮಂಡಿಸುತ್ತೇವೆ. ನಿಮಗೆ ಇಷ್ಟ ಇದೆಯೋ ಇಲ್ಲವೋ, ನಾವು ಇದೇ ಸದನದಲ್ಲಿ ಜಾತಿಗಣತಿಯನ್ನು ಮಂಡಿಸುತ್ತೇವೆ. ದೇಶದ ಜನ ಅರ್ಜುನನ ರೀತಿ ಚಕ್ರವ್ಯೂಹವನ್ನು ಭೇದಿಸಲಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದರು.
“21ನೇ ಶತಮಾನದಲ್ಲೂ ಚಕ್ರವ್ಯೂಹವನ್ನು ರಚಿಸಲಾಗಿದೆ ಹಾಗೂ ಅದು ಕಮಲದ ಆಕಾರದಲ್ಲಿದೆ. ಆ ಚಕ್ರವ್ಯೂಹದ ಚಿಹ್ನೆಯನ್ನು ನರೇಂದ್ರ ಮೋದಿ ಅವರು ಎದೆಯ ಮೇಲೆ ಧರಿಸಿಕೊಂಡು ತಿರುಗಾಡುತ್ತಿದ್ದಾರೆ. ಅಭಿಮನ್ಯುವಿಗೆ ಏನಾಯಿತೋ, ಅದರಂತೆ ಭಾರತದ ಜನರನ್ನು ಆ ಚಕ್ರವ್ಯೂಹದಲ್ಲಿ ಸಿಲುಕಿಸಲಾಗಿದೆ. ಯುವಕರು, ರೈತರು, ಮಹಿಳೆಯರು, ಸಣ್ಣ ಹಾಗೂ ಮಧ್ಯಮ ಶ್ರೇಣಿ ಉದ್ಯಮಿಗಳು ಈಗ ಆ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ” ಎಂದು ರಾಹುಲ್ ಗಾಂಧಿ ಕುಹಕವಾಡಿದ್ದರು.