ಡಿಸ್ಪುರ: ಲೋಕಸಭೆ ಚುನಾವಣೆಗೆ (Lok Sabha Election 2023) ಕೆಲವೇ ತಿಂಗಳು ಬಾಕಿ ಇವೆ. ಮುಸ್ಲಿಮರು ಸೇರಿ ಎಲ್ಲ ಜಾತಿ, ಧರ್ಮದವರ ಮತ ಸೆಳೆಯಲು ಬಿಜೆಪಿಯು ರಣತಂತ್ರ ರೂಪಿಸುತ್ತಿದೆ. ಅಡುಗೆ ಅನಿಲ ಸಿಲಿಂಡರ್ ಬೆಲೆ ಇಳಿಕೆ ಸೇರಿ ಹಲವು ಘೋಷಣೆಗಳ ಮೂಲಕ ಕೇಂದ್ರ ಸರ್ಕಾರವೂ ಜನರ ವಿಶ್ವಾಸ ಗಳಿಸಲು ಯತ್ನಿಸುತ್ತಿದೆ. ಇದರ ಬೆನ್ನಲ್ಲೇ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರು, “ಬಿಜೆಪಿಗೆ ಇನ್ನೂ 10 ವರ್ಷ ಮುಸ್ಲಿಮರ ಮತಗಳು (Muslims Votes) ಬೇಕಾಗಿಲ್ಲ” ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
“ಬಿಜೆಪಿಯು ಜನ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತದೆ ಹಾಗೂ ಮುಸ್ಲಿಮರು (ಬಿಸ್ವಾ ಕರೆಯುವುದು ಮಿಯಾ ಎಂದು) ನಮನ್ನು ಬೆಂಬಲಿಸುತ್ತಾರೆ. ಆದರೆ, ಮುಂದಿನ 10 ವರ್ಷಗಳವರೆಗೆ ಮುಸ್ಲಿಮರು ಬಿಜೆಪಿಗೆ ಮತ ಹಾಕಬೇಕಿಲ್ಲ. ನಾವು ಜನಕಲ್ಯಾಣ ಯೋಜೆನೆಗಳನ್ನು ಜಾರಿಗೆ ತಂದು, ಮುಸ್ಲಿಮರು ಕೂಡ ನರೇಂದ್ರ ಮೋದಿ ಜಿಂದಾಬಾದ್, ಹಿಮಂತ ಬಿಸ್ವಾ ಜಿಂದಾಬಾದ್, ಬಿಜೆಪಿ ಜಿಂದಾಬಾದ್ ಎಂಬ ಸಮಯ ಬಂದಾಗ ಅವರು ನಮಗೆ ಮತ ಹಾಕಲಿ” ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
“ಚುನಾವಣೆಗಳು ಬಂದಾಗ ನಾನೇ ಮುಸ್ಲಿಮರಿಗೆ ಮನವಿ ಮಾಡುತ್ತೇನೆ. ನಮಗೆ (ಬಿಜೆಪಿ) ಮತ ನೀಡಬೇಡಿ ಎಂದು ಕೋರುತ್ತೇನೆ. ನೀವು ಯಾವಾಗ ಕುಟುಂಬ ಯೋಜನೆ ಅನುಸರಿಸುತ್ತೀರೋ, ಬಾಲ್ಯವಿವಾಹ ನಿಲ್ಲಿಸುತ್ತೀರೋ, ಮೂಲಭೂತವಾದವನ್ನು ತೊಗಲಿಸುತ್ತೀರೋ, ಆಗ ಬಿಜೆಪಿಗೆ ಮತ ನೀಡಿ. ಇದೆಲ್ಲ ಆಗಲು 10 ವರ್ಷ ಸಮಯ ಬೇಕಾಗುತ್ತದೆ. ಅಲ್ಲಿಯವರೆಗೆ ಬಿಜೆಪಿಗೆ ಮುಸ್ಲಿಮರ ಮತಗಳ ಅವಶ್ಯಕತೆ ಇಲ್ಲ” ಎಂದಿದ್ದಾರೆ.
ಇದನ್ನೂ ಓದಿ: Love Jihad: ಕೃಷ್ಣ-ರುಕ್ಮಿಣಿ ಪ್ರೀತಿಯನ್ನು ಲವ್ ಜಿಹಾದ್‌ಗೆ ಹೋಲಿಕೆ; ಕೈ ನಾಯಕನಿಗೆ ಹಿಮಂತ್ ಬಿಸ್ವಾ ಎಚ್ಚರಿಕೆ
ವೈಯಕ್ತಿಕವಾಗಿಯೂ ಇದೇ ಹೇಳಿಕೆ ನೀಡಿದ್ದ ಸಿಎಂ
ಬಿಜೆಪಿಗೆ ಮಾತ್ರವಲ್ಲ ವೈಯಕ್ತಿಕವಾಗಿಯೂ ಮುಸ್ಲಿಮರ ಮತಗಳು ಬೇಕಾಗಿಲ್ಲ ಎಂದು ಇದಕ್ಕೂ ಮೊದಲು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದರು. “ನನಗೆ ಈಗ ಮುಸ್ಲಿಮರ ಮತಗಳು ಬೇಕಾಗಿಲ್ಲ. ಈಗಿನ ರಾಜಕಾರಣದ ಪ್ರಮುಖ ಸಮಸ್ಯೆ ಎಂದರೆ ವೋಟ್ ಬ್ಯಾಂಕ್. ನಾನು ಪ್ರತಿ ತಿಂಗಳು ಮುಸ್ಲಿಮರ ಗಲ್ಲಿಗಳಿಗೆ ಭೇಟಿ ನೀಡುತ್ತೇನೆ. ಅವರ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೇನೆ. ಆದರೆ, ನನಗೆ ಮತ ಬ್ಯಾಂಕ್ ಇಷ್ಟವಾಗುವುದಿಲ್ಲ. ಹಾಗಾಗಿ, ನನಗೀಗ ಮುಸ್ಲಿಮರ ಮತಗಳು ಬೇಕಿಲ್ಲ. ಅವರನ್ನು ಅಭಿವೃದ್ಧಿಗೊಳಿಸಿ ಮತ ಕೇಳುತ್ತೇನೆ” ಎಂದು ಹೇಳಿದ್ದರು.