ನವದೆಹಲಿ: ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಮೇ 3ರಿಂದಲೂ ಹಿಂಸಾಚಾರ ತಲೆದೋರಿದೆ. ಮೈತೈ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿ ನೀಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಆರಂಭವಾಗಿರುವ ಹಿಂಸಾಚಾರವು (Manipur Violence) ಇದುವರೆಗೆ 150ಕ್ಕೂ ಅಧಿಕ ಜನರನ್ನು ಬಲಿ ಪಡೆದಿದೆ. ಇದರ ಬೆನ್ನಲ್ಲೇ, ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. “ಮಣಿಪುರದಲ್ಲಿ ಹಿಂಸಾಚಾರ ಹೆಚ್ಚಾಗಲು ಸುಪ್ರೀಂ ಕೋರ್ಟ್‌ಅನ್ನು ಬಳಸದಿರಿ” ಎಂದು ಕೋರ್ಟ್ ಚಾಟಿ ಬೀಸಿದೆ.
ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಲಾಗಿದ್ದು, ಅರ್ಜಿದಾರರ ಪರ ಕಾಲಿನ್ ಗೊನ್ಸಾಲ್ವೆಸ್ ಅವರು ವಾದ ಮಂಡಿಸಿದರು. ಇದೇ ವೇಳೆ ಅವರು ಮಂಡಿಸಿದ ವಾದವು ಮಣಿಪುರದಲ್ಲಿರುವ ಪರಿಶಿಷ್ಟ ಪಂಗಡದವರ ವಿರುದ್ಧ ಇದೆ ಎಂದು ಎನಿಸಿತು. ಆಗ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು, “ಮಣಿಪುರ ಹಿಂಸಾಚಾರವನ್ನು ಹೆಚ್ಚಿಸಲು ಸುಪ್ರೀಂ ಕೋರ್ಟ್‌ಅನ್ನು ಬಳಕೆ ಮಾಡಿಕೊಳ್ಳದಿರಿ” ಎಂದು ಹೇಳಿದರು.
“ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಸುಪ್ರೀಂ ಕೋರ್ಟ್ ಗಮನಿಸಬಹುದು. ಹೆಚ್ಚುವರಿಯಾಗಿ ಯಾವುದಾದರೂ ಕ್ರಮ ತೆಗೆದುಕೊಳ್ಳಿ ಎಂದು ಸರ್ಕಾರಕ್ಕೆ ನಿರ್ದೇಶನ ನೀಡಬಹುದು. ಆದರೆ, ಯಾವುದೇ ರಾಜ್ಯದ ಆಡಳಿತವನ್ನು ಸುಪ್ರೀಂ ಕೋರ್ಟ್ ನೋಡಿಕೊಳ್ಳುವುದಿಲ್ಲ. ಮಣಿಪುರ ಕಾನೂನು ಮತ್ತು ಸುವ್ಯವಸ್ಥೆಯು ಸುಪ್ರೀಂ ಕೋರ್ಟ್ ಕೈಯಲ್ಲಿಲ್ಲ. ಹಾಗಾಗಿ, ನ್ಯಾಯಾಲಯವನ್ನು ಹಿಂಸಾಚಾರ ಹೆಚ್ಚಾಗಲು ಬಳಸಿಕೊಳ್ಳಬಾರದು” ಎಂದು ಅರ್ಜಿದಾರರ ಪರ ವಕೀಲರಿಗೆ ಸಿಜೆಐ ಡಿ.ವೈ. ಚಂದ್ರಚೂಡ್ ಹೇಳಿದರು.
ಇದನ್ನೂ ಓದಿ: Manipur Violence: ಮಣಿಪುರದಲ್ಲಿ ಶಸ್ತ್ರಾಸ್ತ್ರ ಕಳವು ಮಾಡಲು ಬಿಡದ ಯೋಧನ ಮನೆಗೇ ಬೆಂಕಿ ಹಚ್ಚಿದ ದುರುಳರು
“ನಿಮ್ಮ ಬಳಿ ಸಕಾರಾತ್ಮಕ ವಿಷಯಗಳಿದ್ದರೆ, ಸಮಸ್ಯೆ ಬಗೆಹರಿಸಲು ಸಲಹೆಗಳಿದ್ದರೆ ನಮಗೆ ಹೇಳಿ. ಆದರೆ, ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವುದು ಬೇಡ” ಎಂದರು. ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ಮಣಿಪುರ ಹಿಂಸಾಚಾರವು ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ಇದರ ಕುರಿತು ಜನರಿಗೆ ತಪ್ಪು ಮಾಹಿತಿ ನೀಡುವುದು ಬೇಡ” ಎಂದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಮಂಗಳವಾರಕ್ಕೆ (ಜುಲೈ 11) ವಿಚಾರಣೆಯನ್ನು ಮುಂದೂಡಿತು.