ಪಣಜಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ (Dr BR Ambedkar) ಅವರು ಭಾರತದ ಮಹಿಳೆಯರ ಪರವಾಗಿ ಧ್ವನಿ ಎತ್ತಿದ ಮೊದಲ ಸ್ತ್ರೀವಾದಿ ವ್ಯಕ್ತಿಯಾಗಿದ್ದಾರೆ ಎಂದು ಶಶಿ ತರೂರ್ ಅವರು ಹೇಳಿದ್ದಾರೆ. ಗೋವಾದ ಪಣಜಿಯಲ್ಲಿ ಆಯೋಜಿಸಲಾಗಿದ್ದ ಗೋವಾ ಪಾರಂಪರಿಕ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಕಾಂಗ್ರೆಸ್ ನಾಯಕ ತರೂರ್, ಅಂಬೇಡ್ಕರ್ ಅವರು ಬಹುಶಃ ದೇಶದ ಮೊದಲ ಪುರುಷ ಸ್ತ್ರೀವಾದಿ (Male Feminist). 1920, 30 ಮತ್ತು 40ರ ದಶಕದಲ್ಲಿ ಮಹಿಳೆಯರ ಪರವಾಗಿ ಮಹಿಳಾ ಸಭಿಕರನ್ನೂ ಒಳಗೊಂಡಂತೆ ಎಲ್ಲರೆದುರು ಅವರು ಮಾತನಾಡಿದ್ದಾರೆ. ಅಂದು ಅವರು ಮಾಡಿದ ಕೆಲಸವನ್ನು ಈಗಿನ ಪುರುಷ ರಾಜಕಾರಣಿಗಳು ತಮ್ಮ ಪ್ರಗತಿಪರತೆ ಎಂದು ಭಾವಿಸಿಕೊಳ್ಳುತ್ತಾರೆ ಎಂದರು.
ತರೂರ್ ಅವರು ತಮ್ಮ Ambedkar: A Life ಪುಸ್ತಕದ ಕುರಿತು ಮಾತನಾಡುತ್ತಾ, ಒತ್ತಾಯದ ಮದುವೆಗೆ ಒಪ್ಪಿಕೊಳ್ಳದಂತೆ ಅವರು ಮಹಿಳೆಯರಿಗೆ ದಶಕಗಳ ಹಿಂದೆಯೇ ಕರೆ ನೀಡಿದ್ದರು. ವಿಳಂಬದ ಮದುವೆ ಮತ್ತು ವಿಳಂಬವಾಗಿ ಮಕ್ಕಳನ್ನು ಪಡೆಯಲು ಮಹಿಳೆಯರಿಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು. ತಮ್ಮ ಗಂಡನಿಗೆ ಸರಿಸಮಾನವಾಗಿ ಬದುಕುವಂತೆ ಅವರು ಮಹಿಳೆಯರಿಗೆ ಕರೆ ನೀಡಿದ್ದರು ಎಂದು ಹೇಳಿದರು.
ಒಬ್ಬ ಜನಪ್ರತಿನಿಧಿಯಾಗಿ ಅಂಬೇಡ್ಕರ್ ಅವರು ಮಹಿಳಾ ಕೆಲಸಗಾರರು ಮತ್ತು ಕಾರ್ಮಿಕರ ಪರವಾಗಿ ಹೋರಾಡಿದರು. ಇದು 80, 90 ವರ್ಷಗಳ ಹಿಂದೆ ಒಂದು ಗಮನಾರ್ಹ ಚಿಂತನೆಯಾಗಿತ್ತು ಎನ್ನಬಹುದು. ಅವರನ್ನು ದಲಿತ ನಾಯಕರನ್ನಾಗಿ ನೋಡುತ್ತಿದ್ದೇವೆ. ಅವರು ದೇಶದ ಪ್ರಮುಖ ದಲಿತ ನಾಯಕ, ಅದರಲ್ಲೇನೂ ಅನುಮಾನ ಬೇಡ. ಅವರು ತಮ್ಮ 20ನೇ ವಯಸ್ಸಿನಿಂದಲೇ ಪ್ರಭಾವಿ ದನಿಯಾಗಿದ್ದು ಮತ್ತು ಹೆಚ್ಚೆಚ್ಚು ಪ್ರಭಾವಿಯಾಗುತ್ತಲೇ ಸಾಗಿದರು ಎಂದು ತರೂರ್ ಹೇಳಿದರು.
ಇದನ್ನೂ ಓದಿ | Modi in Karnataka | ಜ್ಞಾನಭಾರತಿಯಲ್ಲಿ ಅಂಬೇಡ್ಕರ್ ಪ್ರತಿಮೆ ಅನಾವರಣ ಮಾಡಿದ ಮೋದಿ