ನವ ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆದ ಶ್ರದ್ಧಾ ವಾಳ್ಕರ್ (Shraddha Walkar) ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಪೊಲೀಸರು ಸುಮಾರು 3000 ಪುಟಗಳ ಕರಡು ಚಾರ್ಜ್ಶೀಟ್ ಸಿದ್ಧಪಡಿಸಿ ಇಟ್ಟಿದ್ದಾರೆ. ವಿಧಿವಿಜ್ಞಾನ ವರದಿಗಳು ಮತ್ತು ಎಲೆಕ್ಟ್ರಾನಿಕ್ ಪುರಾವೆಗಳು ಅಂದರೆ ಇಮೇಲ್, ಮೊಬೈಲ್ ಫೋಟೋಗ್ರಾಫ್, ಹಣ ವರ್ಗಾವಣೆ ದಾಖಲೆಗಳನ್ನು ಒಳಗೊಂಡಂತೆ ಸುಮಾರು 100 ಸಾಕ್ಷಿಗಳನ್ನು ಈ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಈ ಕರಡು ದಾಖಲೆಯನ್ನು ಕಾನೂನು ತಜ್ಞರು ಪರಿಶೀಲನೆ ನಡೆಸುತ್ತಿದ್ದು, ಶೀಘ್ರದಲ್ಲೇ ಅಂತಿಮ ಆರೋಪ ಪಟ್ಟಿ ಸಿದ್ಧವಾಗಲಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ದೆಹಲಿಯಲ್ಲಿ 2022ರ ಮೇ ತಿಂಗಳಲ್ಲಿ ನಡೆದಿದ್ದ ಶ್ರದ್ಧಾ ವಾಳ್ಕರ್ ಭೀಕರ ಹತ್ಯೆ ಪ್ರಕರಣ ಇತ್ತೀಚೆಗಷ್ಟೇ ಬೆಳಕಿಗೆ ಬಂದಿದೆ. ಕೊಲೆ ಮಾಡಿದ ಆರೋಪಿ ಅಫ್ತಾಬ್ ಪೂನಾವಾಲಾ ಸದ್ಯ ನ್ಯಾಯಾಂಗ ಬಂಧನದಲ್ಲಿಯೇ ಇದ್ದಾನೆ. ಈತ ತನ್ನ ಲಿವ್ ಇನ್ ಸಂಗಾತಿ ಶ್ರದ್ಧಾಳನ್ನು ಉಸಿರುಗಟ್ಟಿಸಿ ಕೊಂದು, ಆಕೆಯ ಶವವನ್ನು 35ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿದ್ದ. ಬಳಿಕ 300 ಲೀಟರ್ ಸಾಮರ್ಥ್ಯದ ಫ್ರಿಜ್ ಖರೀದಿಸಿ ಆ ಶವದ ತುಂಡುಗಳನ್ನು ಅದರಲ್ಲಿ ಇಟ್ಟಿದ್ದ. ನಂತರ ತಮ್ಮ ಅಪಾರ್ಟ್ಮೆಂಟ್ ಸಮೀಪವೇ ಇದ್ದಿದ್ದ ಮೆಹ್ರೌಲಿ ಅರಣ್ಯದ ಹಲವು ಭಾಗಗಳಲ್ಲಿ ಅವುಗಳನ್ನು ಎಸೆದಿದ್ದ. ಮೆಹ್ರೌಲಿ ಅರಣ್ಯವನ್ನು ಜಾಲಾಡಿದಾಗ ಹಲವು ಮೂಳೆಗಳು ಪತ್ತೆಯಾಗಿದ್ದು, ಅವೆಲ್ಲ ಶ್ರದ್ಧಾಳದ್ದೇ ಎಂದೂ ಡಿಎನ್ಎ ಪರೀಕ್ಷೆಯಲ್ಲಿ.
ಇದನ್ನೂ ಓದಿ: Shraddha Murder Case | ಶ್ರದ್ಧಾ ವಾಳ್ಕರ್ ಹತ್ಯೆ ಕೇಸ್ ಸಿಬಿಐಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದ ದೆಹಲಿ ಹೈಕೋರ್ಟ್
ಅಫ್ತಾಬ್ ಮೇ ತಿಂಗಳಲ್ಲಿಯೇ ಶ್ರದ್ಧಾಳನ್ನು ಕೊಂದಿದ್ದರೂ ಅದು ಗೊತ್ತಾಗದಂತೆ ಭಾರಿ ನಾಟಕವಾಡಿದ್ದ. ತಿಂಗಳುಗಳ ಕಾಲ ಆಕೆಯ ಸೋಷಿಯಲ್ ಮೀಡಿಯಾವನ್ನು ಆತನೇ ಹ್ಯಾಂಡಲ್ ಮಾಡುವ ಮೂಲಕ, ಆಕೆ ಬದುಕಿದ್ದಾಳೆ ಎಂಬುದನ್ನು ಬಿಂಬಿಸಲು ಹೋಗಿದ್ದ. ಶ್ರದ್ಧಾ ತಂದೆ-ತಾಯಿಯಿಂದ ದೂರವಾಗಿದ್ದರೂ, ಕೆಲವು ಸಂಬಂಧಿಕರೊಂದಿಗೆ ಸಂಪರ್ಕದಲ್ಲಿದ್ದಳು. ಆದರೆ ಬರುಬರುತ್ತ ಆಕೆ ಸಂಪರ್ಕಕ್ಕೆ ಸಿಗದಂತಾದಾಗ ಶ್ರದ್ಧಾಳ ತಂದೆಯ ಸ್ನೇಹಿತರೊಬ್ಬರು ಅನುಮಾನ ವ್ಯಕ್ತಪಡಿಸಿದ್ದರು. ಆಕೆಯ ತಂದೆಗೆ ಈ ವಿಚಾರವನ್ನು ಹೇಳಿದ್ದರು. ಅದರ ಬೆನ್ನಲ್ಲೇ ಶ್ರದ್ಧಾಳ ಅಪ್ಪ ದೂರು ದಾಖಲು ಮಾಡಿದ್ದರು. ತನಿಖೆ ನಡೆಸಿದಾಗ ಆಕೆ ಕೊಲೆಯಾಗಿದ್ದು ಗೊತ್ತಾಗಿದೆ. ನವೆಂಬರ್ 12ರಂದು ಅಫ್ತಾಬ್ ಅರೆಸ್ಟ್ ಆಗಿದ್ದಾನೆ ಮತ್ತು ಕೊಲೆಯನ್ನು ತಾನೇ ಮಾಡಿದ್ದಾಗಿಯೂ ಒಪ್ಪಿಕೊಂಡಿದ್ದಾನೆ.