ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನಿವಾಸದಲ್ಲಿ ಹೈಡ್ರಾಮಾ ನಡೆದಿದೆ. ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ, ಅತ್ಯಾಚಾರಕ್ಕೀಡಾದ ಮಹಿಳೆಯರ ಜತೆ ನಾನು ಮಾತನಾಡಿದೆ ಎಂಬುದಾಗಿ ರಾಹುಲ್ ಗಾಂಧಿ ಅವರು ಶ್ರೀನಗರದಲ್ಲಿ ಮಾಡಿದ ಭಾಷಣದ ಹಿನ್ನೆಲೆಯಲ್ಲಿ ಮಾಹಿತಿ ಪಡೆಯಲು ಪೊಲೀಸರು ರಾಹುಲ್ ಗಾಂಧಿ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಆದರೆ, ಇದೇ ವೇಳೆ, ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದು ಹೈಡ್ರಾಮಾಕ್ಕೆ ಕಾರಣವಾಯಿತು.
ಮಾರ್ಚ್ 16ರಂದು ಪೊಲೀಸರು ನೋಟಿಸ್ ನೀಡಿದಂತೆ ಭಾನುವಾರ (ಮಾರ್ಚ್ 19) ದೆಹಲಿಯ 12 ತುಘಲಕ್ ಲೇನ್‌ನಲ್ಲಿರುವ ರಾಹುಲ್ ಗಾಂಧಿ ನಿವಾಸಕ್ಕೆ ಪೊಲೀಸರು ಭೇಟಿ ನೀಡಿದರು. ಆದರೆ, ರಾಹುಲ್ ಗಾಂಧಿ ಅವರು ತಮ್ಮ ಲೋಕಸಭೆ ಕ್ಷೇತ್ರವಾದ ವಯನಾಡ್‌ಗೆ ತೆರಳಿದ ಕಾರಣ ಪೊಲೀಸರ ಜತೆ ಮಾತನಾಡಲು ಆಗಲಿಲ್ಲ. ಆದಾಗ್ಯೂ, ಮಾಹಿತಿ ಒದಗಿಸಲು ಒಂದಷ್ಟು ಸಮಯ ಬೇಕು ಎಂಬುದಾಗಿ ಪೊಲೀಸರಿಗೆ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ. ಇದಾದ ಬಳಿಕ ಪೊಲೀಸರು ಮತ್ತೊಂದು ನೋಟಿಸ್ ನೀಡಿ, ಅಲ್ಲಿಂದ ತೆರಳಿದ್ದಾರೆ. ಆದರೆ, ಯಾವ ದಿನ ರಾಹುಲ್ ಗಾಂಧಿ ಅವರಿಂದ ಮಾಹಿತಿ ಪಡೆಯಲಾಗುತ್ತದೆ ಎಂಬುದರ ಕುರಿತು ತೀರ್ಮಾನ ಆಗಿಲ್ಲ.
ಕಾಂಗ್ರೆಸ್ ನಾಯಕರ ಪ್ರತಿಭಟನೆ
ರಾಹುಲ್ ಗಾಂಧಿ ನಿವಾಸಕ್ಕೆ ಪೊಲೀಸರು ಆಗಮಿಸುತ್ತಲೇ ಕಾಂಗ್ರೆಸ್ ನಾಯಕರು ನಿವಾಸಕ್ಕೆ ತೆರಳಿ ಪ್ರತಿಭಟನೆ ನಡೆಸಿದರು. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ರಾಜ್ಯಸಭೆ ಸದಸ್ಯರಾದ ಜೈರಾಮ್ ರಮೇಶ್, ಅಭಿಷೇಕ್ ಮನು ಸಿಂಘ್ವಿ ಸೇರಿ ಹಲವರು ರಾಹುಲ್ ನಿವಾಸದ ಬಳಿ ಪ್ರತಿಭಟನೆ ನಡೆಸಿದರು. “ನರೇಂದ್ರ ಮೋದಿ ಅವರಿಗೆ ಭೀತಿಯುಂಟಾಗಿದೆ. ಹಾಗಾಗಿ, ರಾಹುಲ್ ಗಾಂಧಿ ನಿವಾಸಕ್ಕೆ ಪೊಲೀಸರನ್ನು ಕಳುಹಿಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ಗಲಾಟೆ ಹೆಚ್ಚಾದ ಕಾರಣ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರನ್ನು ಬಂಧಿಸಿ, ಬಳಿಕ ಬಿಡುಗಡೆ ಮಾಡಿದರು.
ಕಾಂಗ್ರೆಸ್ ನಾಯಕರ ಬಂಧನ
ಏನಿದು ಪ್ರಕರಣ?
ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯ ಸಮಾರೋಪವನ್ನು ಶ್ರೀನಗರದಲ್ಲಿ ಆಯೋಜಿಸಿದ್ದರು. ಇದೇ ವೇಳೆ ಮಾತನಾಡುತ್ತ, “ದೇಶದಲ್ಲಿ ಈಗಲೂ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ನಾನು ಭಾರತ್ ಜೋಡೋ ಯಾತ್ರೆ ಕೈಗೊಳ್ಳುವ ವೇಳೆ ಒಂದಷ್ಟು ಮಹಿಳೆಯರ ಜತೆ ನಾನು ಮಾತನಾಡಿದೆ. ಇವರಲ್ಲೇ ಕೆಲವು ಜನ ನಾವು ಕೂಡ ಅತ್ಯಾಚಾರ ಸಂತ್ರಸ್ತೆಯರು ಎಂಬುದಾಗಿ ಹೇಳಿದ್ದರು. ಇದರಿಂದ ನನ್ನ ಮನಸ್ಸಿಗೆ ಖೇದವಾಯಿತು” ಎಂಬುದಾಗಿ ಹೇಳಿದ್ದರು.
ರಾಹುಲ್ ಗಾಂಧಿ ಅವರು ಭಾಷಣವನ್ನು ಆಧರಿಸಿ ಅವರ ನಿವಾಸಕ್ಕೆ ಪೊಲೀಸರು ತೆರಳಿದ್ದಾರೆ. ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಅತ್ಯಾಚಾರ ಸಂತ್ರಸ್ತೆಯರ ಕುರಿತು ಮಾಹಿತಿ ಕೊಡಿ, ಅವರಿಗೆ ನ್ಯಾಯ ಒದಗಿಸಲಾಗುವುದು ಎಂದು ಪೊಲೀಸರು ಕಾಂಗ್ರೆಸ್ ನಾಯಕನಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Viral Video: ಖರ್ಗೆ ಬೆನ್ನಿಗೆ ಕೈ ಒರೆಸಿದ ರಾಹುಲ್ ಗಾಂಧಿ, ಟಿಶ್ಯು ಪೇಪರ್ ರೀತಿ ಬಳಕೆ ಎಂದು ಟೀಕಿಸಿದ ಬಿಜೆಪಿ