Site icon Vistara News

Draupadi Murmu | 15ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ದ್ರೌಪದಿ ಮುರ್ಮು

Draupadi Murmu Takes Oath

ನವ ದೆಹಲಿ: ಭಾರತದ 15ನೇ ರಾಷ್ಟ್ರಪತಿಯಾಗಿ ಇಂದು ದ್ರೌಪದಿ ಮುರ್ಮು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಪ್ರತಿಜ್ಞಾವಿಧಿ ಬೋಧಿಸಿದರು. ಮುರ್ಮು ಅವರು ಸಂಸತ್ತಿನ ದಾಖಲೆಗೆ ಸಹಿ ಹಾಕಿದರು. ಹಾಗೇ, ಸಂಸತ್ತಿನ ಹೊರಭಾಗದಲ್ಲಿ 21 ಕುಶಾಲುತೋಪುಗಳನ್ನು ಸಿಡಿಸಿ ಗೌರವ ಸಲ್ಲಿಸಲಾಯಿತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು, ಲೋಕಸಭಾ ಸ್ಪೀಕರ್‌ ಓಂಬಿರ್ಲಾ, ನಿರ್ಗಮಿತ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಮತ್ತು ಇತರ ಸಚಿವರು, ಸಂಸದರು ಉಪಸ್ಥಿತರಿದ್ದರು.

ಮುರ್ಮು ಇಂದು ಬೆಳಗ್ಗೆ 8.30ಕ್ಕೆ ಅವರು ಮೊದಲು ರಾಜ್‌ಘಾಟ್‌ಗೆ ತೆರಳಿ ಮೊದಲಿಗೆ ಮಹಾತ್ಮ ಗಾಂಧಿ ಸಮಾಧಿಗೆ ಗೌರವ ಸಮರ್ಪಿಸಿದರು. ಅದಾದ ಬಳಿಕ ರಾಷ್ಟ್ರಪತಿ ಭವನಕ್ಕೆ ತೆರಳಿ, ನಿರ್ಗಮಿತ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಮತ್ತು ಅವರ ಪತ್ನಿ ಸವಿತಾ ಕೋವಿಂದ್‌ರನ್ನು ಭೇಟಿ ಮಾಡಿದರು. ಬಳಿಕ ರಾಮನಾಥ ಕೋವಿಂದ್‌ ಅವರ ಜತೆಗೇ ಸಂಸತ್ತಿಗೆ ಆಗಮಿಸಿದರು. ದ್ರೌಪದಿ ಮುರ್ಮು ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆ ರಾಮನಾಥ ಕೋವಿಂದ್‌ ಅವರು ಸಾಂಕೇತಿಕವಾಗಿ ತಮ್ಮ ಕುರ್ಚಿಯನ್ನು ಬಿಟ್ಟುಕೊಡುವ ಮೂಲಕ, ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

ಭಾರತದ 15ನೇ ರಾಷ್ಟ್ರಪತಿ ಚುನಾವಣೆ ಜುಲೈ 18ರಂದು ನಡೆದಿತ್ತು. ದ್ರೌಪದಿ ಮುರ್ಮು ವಿರುದ್ಧ ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್‌ ಸಿನ್ಹಾ ಪ್ರತಿಪಕ್ಷಗಳ ಒಕ್ಕೂಟದಿಂದ ಕಣಕ್ಕೆ ಇಳಿದಿದ್ದರು. ಆದರೆ ದ್ರೌಪದಿ ಮುರ್ಮು ತಮ್ಮ ಪ್ರತಿಸ್ಪರ್ಧಿಗಿಂತ ಶೇ. 64ರಷ್ಟು ಹೆಚ್ಚಿನ ಮತ ಗಳಿಸಿ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಈ ಮೂಲಕ ದೇಶದ ಎರಡನೇ ಮಹಿಳಾ ರಾಷ್ಟ್ರಪತಿ ಮತ್ತು ಬುಡಕಟ್ಟು ಜನಾಂಗದ ಪ್ರಥಮ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ರಾಮನಾಥ ಕೋವಿಂದ್‌ ಅಧಿಕಾರ ಅವಧಿ ಜುಲೈ 24ಕ್ಕೆ ಮುಕ್ತಾಯವಾಗಿದ್ದು, ಅವರು ನಿನ್ನೆ ಸಂಜೆ ವಿದಾಯದ ಭಾಷಣ ಮಾಡಿದ್ದಾರೆ.

ಇದನ್ನೂ ಓದಿ: Draupadi Murmu Oath Ceremony| ರಾಜ್‌ಘಾಟ್‌ನಲ್ಲಿ ಗಾಂಧೀಜಿಗೆ ನಮನ ಸಲ್ಲಿಸಿದ ದ್ರೌಪದಿ ಮುರ್ಮು

Exit mobile version