ನವ ದೆಹಲಿ: ಭಾರತದ ೧೫ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅವರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಬೆಳಗ್ಗೆ ೧೦.೧೫ಕ್ಕೆ ಕಾರ್ಯಕ್ರಮ ನಡೆಯಲಿದೆ.
ಸಮಾರಂಭದಲ್ಲಿ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಅವರು ನೂತನ ರಾಷ್ಟ್ರಪತಿಯವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಜುಲೈ ೨೧ರಂದು ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಚುನಾವಣೆಯಲ್ಲಿ ಐತಿಹಾಸಿಕ ಜಯ ಗಳಿಸಿದ ಬುಡಕಟ್ಟು ಸಮುದಾಯದ ಮೊಟ್ಟ ಮೊದಲ ಮಹಿಳಾ ನಾಯಕಿ ಎಂಬ ಖ್ಯಾತಿಗೆ ಭಾಜನರಾಗಿದ್ದರು. ಇದು ಮಾತ್ರವಲ್ಲದೆ ಸ್ವತಂತ್ರ ಭಾರತದಲ್ಲಿ ಜನಿಸಿದ ಮೊದಲ ರಾಷ್ಟ್ರಪತಿ ಎಂಬ ದಾಖಲೆಯೂ ದ್ರೌಪದಿ ಮುರ್ಮು ಅವರಿಗೆ ಸಲ್ಲುತ್ತದೆ. ರಾಷ್ಟ್ರಪತಿ ಹುದ್ದೆಯನ್ನು ಕಿರಿಯ ವಯಸ್ಸಿನಲ್ಲಿ ಅಲಂಕರಿಸಿದವರೂ ಅವರೇ ಆಗಲಿದ್ದಾರೆ. ಪ್ರತಿಭಾ ಪಾಟೀಲ್ ಅವರ ಬಳಿಕ ರಾಷ್ಟ್ರಪತಿಯಾದ ಎರಡನೇ ಮಹಿಳೆ ಎನಿಸಿದ್ದಾರೆ. ಒಡಿಶಾದಿಂದ ಈ ಹಿಂದೆ ವಿ.ವಿ ಗಿರಿ ರಾಷ್ಟ್ರಪತಿಯಾಗಿದ್ದರು.
ರಾಷ್ಟ್ರಪತಿಯವರ ಕಚೇರಿಯಿಂದ ಪ್ರಮಾಣ ವಚನ ಸಮಾರಂಭದ ವಿಸ್ತೃತ ವಿವರ ಬಿಡುಗಡೆಯಾಗಿದೆ. ರಾಷ್ಟ್ರಪತಿ ಭವನದಿಂದ ಬೆಳಗ್ಗೆ ೮.೩೦-೯.೦೦ ಗಂಟೆಗೆ ಕಾರ್ಯಕ್ರಮದ ಪ್ರಕ್ರಿಯೆಗಳು ಆರಂಭವಾಗಲಿದೆ. ಬಳಿಕ ಸಂಸತ್ತಿಗೆ ಸ್ಥಳಾಂತರವಾಗಲಿದೆ. ೧೦ ಗಂಟೆಯ ವೇಳೆಗೆ ಹಾಲಿ ರಾಷ್ಟ್ರಪತಿ ರಾಮ ನಾಥ್ ಕೋವಿಂದ್ ಅವರು ಮತ್ತು ನಿಯೋಜಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ ಭವನಕ್ಕೆ ಆಗಮಿಸಲಿದ್ದಾರೆ. ರಾಜ್ಯಸಭೆ, ಲೋಕಸಭೆಯ ಅಧ್ಯಕ್ಷರು ಮತ್ತು ಮುಖ್ಯ ನ್ಯಾಯಮೂರ್ತಿಗಳು ಅವರನ್ನು ಬರ ಮಾಡಿಕೊಳ್ಳಲಿದ್ದಾರೆ. ಬಳಿಕ ನೂತನ ರಾಷ್ಟ್ರಪತಿಯವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ೧೫ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ೧೦.೩೦ಕ್ಕೆ ಚೊಚ್ಚಲ ಭಾಷಣ ಮಾಡಲಿದ್ದಾರೆ. ಬಳಿಕ ಅವರು ರಾಷ್ಟ್ರಪತಿ ಭವನಕ್ಕೆ ತೆರಳಲಿದ್ದು, ಅಲ್ಲಿ ಗೌರವ ಸ್ವೀಕರಿಸಲಿದ್ದಾರೆ. ನಿರ್ಗಮಿತ ರಾಷ್ಟ್ರಪತಿಯವರಿಗೂ ಗೌರವ ಸಲ್ಲಿಸಲಾಗುವುದು.
ರಾಜ್ಯಸಭೆಯ ಅಧ್ಯಕ್ಷ ಹಾಗೂ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಇತರ ಕೇಂದ್ರ ಸಚಿವರು, ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಂಸದರು, ರಾಯಭಾರ ಕಚೇರಿಗಳ ಮುಖ್ಯಸ್ಥರು, ಮಿಲಿಟರಿ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ವೇಳಾಪಟ್ಟಿ ಇಂತಿದೆ
- ಬೆಳಗ್ಗೆ ೮.೩೦: ನಿಯೋಜಿತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ ಘಾಟ್ಗೆ ಭೇಟಿ ನೀಡಿ ಮಹಾತ್ಮ ಗಾಂಧೀಜಿಯವರಿಗೆ ಗೌರವ ನಮನ ಸಲ್ಲಿಸಲಿದ್ದಾರೆ.
- ೯.೨೨: ರಾಷ್ಟ್ರಪತಿ ಭವನಕ್ಕೆ ದ್ರೌಪದಿ ಮುರ್ಮು ಅವರ ಆಗಮನ. ಹಾಲಿ ರಾಷ್ಟ್ರಪತಿ ಅವರು ಬರ ಮಾಡಿಕೊಳ್ಳಲಿದ್ದಾರೆ.
- ೯.೪೨: ಹಾಲಿ ರಾಷ್ಟ್ರಪತಿ ಮತ್ತು ನಿಯೋಜಿತ ರಾಷ್ಟ್ರಪತಿ ಅವರು ದರ್ಬಾರ್ ಹಾಲ್ಗೆ ಭೇಟಿ.
- ೯.೪೯: ರಾಷ್ಟ್ರಪತಿಯವರ ಅಂಗ ರಕ್ಷಕ ಪಡೆಯಿಂದ ರಾಷ್ಟ್ರೀಯ ಗೌರವ ಸಲ್ಲಿಕೆ.
- ೧೦.೦೩: ರಾಷ್ಟ್ರಪತಿ ಮತ್ತು ನಿಯೋಜಿತ ರಾಷ್ಟ್ರಪತಿ ಅವರು ಸಂಸತ್ತಿಗೆ ಆಗಮನ.
- ೧೦.೧೫: ನೂತನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕಾರ
ಭಾರತದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ಬುಡಕಟ್ಟು ಸಮುದಾಯದ ಮೊದಲ ಮಹಿಳೆ ಎಂಬ ಐತಿಹಾಸಿಕ ಸಾಧನೆಗೆ ದ್ರೌಪದಿ ಮುರ್ಮು ಅವರು ಪಾತ್ರರಾಗಿದ್ದಾರೆ. ಒಡಿಶಾದಲ್ಲಿ ಹಿಂದುಳಿದ ಆದಿವಾಸಿ/ ಬುಡಕಟ್ಟು ಸಮುದಾಯದ ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಕಷ್ಟಕಾರ್ಪಣ್ಯಗಳ ನಡುವೆ ಧೃತಿಗೆಡದೆ ಓದನ್ನು ಮುಂದುವರಿಸಿ ಶಾಲಾ ಶಿಕ್ಷಕಿಯಾಗಿದ್ದ ಅವರು ಬಳಿಕ ಅಲ್ಲಿಗೇ ಸೀಮಿತರಾಗಲಿಲ್ಲ. ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿ, ಕೌನ್ಸಿಲರ್, ಶಾಸಕಿ, ಸಚಿವೆ, ರಾಜ್ಯಪಾಲೆ ಮತ್ತು ಇದೀಗ ರಾಷ್ಟ್ರಪತಿ ಹುದ್ದೆಯ ತನಕ ಸಾಗಿ ಬಂದ ಹಾದಿ ಎಲ್ಲರಿಗೂ ಆದರ್ಶಪ್ರಾಯ.
ಶಾಲಾ ಶಿಕ್ಷಕಿಯಾಗಿದ್ದ ದ್ರೌಪದಿ ಮುರ್ಮು: 1958ರಲ್ಲಿ ಜನಿಸಿದ ಮುರ್ಮು ಅವರಿಗೆ ಈಗ 64 ವರ್ಷ. ಒಡಿಶಾದ ಮಯೂರ್‌ಭಂಜ್ ಎಂಬಲ್ಲಿನ ಬುಡಕಟ್ಟು ಸಮುದಾಯದಲ್ಲಿ ಜನಿಸಿದರು. ಬಿಎ ವರೆಗೂ ಶಿಕ್ಷಣ ಪಡೆದಿದ್ದು, ರಾಜಕಾರಣ ಸೇರುವ ಮುನ್ನ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ತಂದೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದರು. ಹಿಂದುಳಿದ ಜಿಲ್ಲೆಯ ಬಡ ಕುಟುಂಬದಲ್ಲಿ ಜನಿಸಿದ ದ್ರೌಪದಿ ಮುರ್ಮು ಅವರ ಬಾಲ್ಯದ ಕಾಲ ಸವಾಲುಗಳಿಂದ ಹೊರತಾಗಿರಲಿಲ್ಲ. ಎಲ್ಲ ಅಡೆತಡೆಗಳನ್ನು ಅವರು ದಿಟ್ಟತನದಿಂದ ಎದುರಿಸಿದರು. ಮಯೂರ್ ಭಂಜ್, ಒಡಿಶಾ ರಾಜಧಾನಿ ಭುವನೇಶ್ವರದಿಂದ ೨೮೭ ಕಿ.ಮೀ ದೂರದಲ್ಲಿದೆ.
ಜಾರ್ಖಂಡ್ ರಾಜ್ಯಪಾಲರಾಗಿಯೂ ಸೇವೆ
1997ರಲ್ಲಿ ಬಿಜೆಪಿಗೆ ಸೇರ್ಪಡೆಯಾದ ದ್ರೌಪದಿ ಮುರ್ಮು ಅವರು ಅದೇ ವರ್ಷ ರಾಯ್‌ರಂಗ್‌ಪುರದಲ್ಲಿ ಕೌನ್ಸಿಲರ್ ಆಗಿ ಆಯ್ಕೆಯಾದರು. ಬಳಿಕ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಒಡಿಶಾ ರಾಜಕಾರಣದಲ್ಲಿ ಸಾಧನೆಯ ಒಂದೊಂದೇ ಮೆಟ್ಟಿಲೇರಿದರು. 2000ದಲ್ಲಿ ರಾಯ್‌ರಂಗ್‌ಪುರ ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾದರು. ಬಿಜೆಪಿ ಮತ್ತು ಬಿಜು ಜನತಾದಳ ಮೈತ್ರಿಕೂಟದ ಸರ್ಕಾರದಲ್ಲಿ, ಸಿಎಂ ನವೀನ್ ಕುಮಾರ್ ಪಾಟ್ನಾಯಕ್ ಅವರ ಸಚಿವ ಸಂಪುಟದಲ್ಲಿ ಸಾರಿಗೆ, ವಾಣಿಜ್ಯ, ಮೀನುಗಾರಿಕೆ ಸಚಿವರಾಗಿ ಕಾರ್ಯ ನಿರ್ವಹಿಸಿದರು. 2004ರಲ್ಲಿ ಮತ್ತೆ ಶಾಸಕಿಯಾಗಿ ಆರಿಸಿ ಬಂದರು. 2006ರಲ್ಲಿ ಬಿಜೆಪಿ ಪರಿಶಿಷ್ಟ ಪಂಗಡ ಮೋರ್ಛಾದ ಅಧ್ಯಕ್ಷೆಯಾದರು. ೨೦೦೭ರಲ್ಲಿ ಒಡಿಶಾ ಅಸೆಂಬ್ಲಿಯಿಂದ ಉತ್ತಮ ಶಾಸಕರಿಗೆ ನೀಡುವ ನೀಲಕಂಠ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದರು. ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. 2015ರಲ್ಲಿ ಮುರ್ಮು ಅವರನ್ನು ಜಾರ್ಖಂಡ್‌ನ ರಾಜ್ಯಪಾಲರನ್ನಾಗಿ ಆಯ್ಕೆ ಮಾಡಲಾಯಿತು. ನರೇಂದ್ರ ಮೋದಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರು ಇವರ ನೆಚ್ಚಿನ ರಾಜಕೀಯ ನಾಯಕರು.
ಇದನ್ನೂ ಓದಿ:ಶಾಲಾ ಶಿಕ್ಷಕಿಯಿಂದ ರಾಷ್ಟ್ರಪತಿ ತನಕ ದ್ರೌಪದಿ ಮುರ್ಮು ಸಾಧನೆಯ ಜೈತ್ರಯಾತ್ರೆ