ಭುವನೇಶ್ವರ: ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯು (DRDO) ಮಂಗಳವಾರ ಅತಿ ಕಡಿಮೆ ವ್ಯಾಪ್ತಿಯ ರಕ್ಷಣಾ ವ್ಯವಸ್ಥೆ (VSHORADS Missile) ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ಮಾಡಿದೆ. ಒಡಿಶಾದ ಕರಾವಳಿ ತೀರದಲ್ಲಿ ಉಡಾವಣೆ ಮಾಡಲಾಗಿದೆ.
ಡಿಆರ್‌ಡಿಒ ಪ್ರಕಾರ, VSHORADS, ಸುಲಭವಾಗಿ ಹೊತ್ತುಕೊಂಡು ಹೋಗಬಹುದಾದ ಅಂದರೆ, ಮ್ಯಾನ್ ಪೋರ್ಟೆಬಲ್ ಏರ್ ಡಿಫೆನ್ಸ್ ಸಿಸ್ಟಮ್ (MANPAD) ಕ್ಷಿಪಣಿಯಾಗಿದೆ. ಇದನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿದ್ದು, ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇದು ಭೂಮಿಯಿಂದ ಆಕಾಶಕ್ಕೆ ನೆಗೆಯುವ (Surface to Air missile) ಕ್ಷಿಪಣಿ ಆಗಿದೆ.
ವ್ಯೂಹಾತ್ಮಕವಾಗಿ ಪ್ರಮುಖವಾಗಿರುವ ಪ್ರದೇಶಗಳು ಹಾಗೂ ನಗರಗಳಲ್ಲಿ ರಕ್ಷಣಾ ವ್ಯವಸ್ಥೆಯನ್ನಾಗಿ, ಕಡಿಮೆ ದೂರದಲ್ಲಿ ಗುರಿಗಳನ್ನು ನಿಖರವಾಗಿ ಹೊಡೆದುರುಳಿಸಲು ಈ ಕ್ಷಿಪಣಿಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಸದ್ಯ, ದೇಶದ ಸೇನೆಯಲ್ಲಿ ಏರ್ ಡಿಫೆನ್ಸ್ ಗನ್ಸ್ ಎಲ್-೭೦ ಹಾಗೂ ಝೆಡ್‌ಯು-೨೩ ಇದ್ದು, ಇವು ನಾಲ್ಕು ದಶಕಗಳಷ್ಟು ಹಳೆಯದಾದ ಕಾರಣ ಈಗ ಪರಿಣಾಮಕಾರಿ ಅಲ್ಲ. ಹಾಗಾಗಿ, VSHORADS ಕ್ಷಿಪಣಿಯು ಪ್ರಮುಖ ಎಂದು ವಿಶ್ಲೇಷಿಸಲಾಗಿದೆ.
ಇದನ್ನೂ ಓದಿ | ಅಣ್ವಸ್ತ್ರ ಹೊತ್ತೊಯ್ಯೋ ಪೃಥ್ವಿ 2 ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿ, ಇಲ್ಲಿದೆ ಸಾಮರ್ಥ್ಯದ ವಿವರ