ನವ ದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯ ಹಿರಿಯ ನಿರ್ದೇಶಕರೊಬ್ಬರು ಹನಿಟ್ರ್ಯಾಪ್ಗೆ ಒಳಗಾಗಿರುವ ಶಂಕೆ ವ್ಯಕ್ತವಾಗಿದೆ. ಪಾಕಿಸ್ತಾನದ ಗುಪ್ತಚರ ದಳದ ಏಜೆಂಟ್ಗೆ ಭಾರತದ ಸೇನೆ, ರಕ್ಷಣಾ ವ್ಯವಸ್ಥೆಯ ಬಗ್ಗೆ ಮಹತ್ವದ ಮಾಹಿತಿಯನ್ನು ನೀಡಿರುವ ಆರೋಪದಡಿ ಅವರನ್ನು ಮಹಾರಾಷ್ಟ್ರ ರಾಜ್ಯ ಉಗ್ರ ವಿರೋಧಿ ದಳ (ATS)ಬಂಧಿಸಿದೆ. ವಿಜ್ಞಾನಿಯಾಗಿದ್ದ ಪ್ರದೀಪ್ ಕುರುಲ್ಕರ್ (60) ಬಂಧಿತ ನಿರ್ದೇಶಕ. ಪುಣೆಯಲ್ಲಿ ಡಿಆರ್ಡಿಒ (ಎಂಜಿನಿಯರ್) ನಿರ್ದೇಶಕರಾಗಿದ್ದರು.
ವಿಜ್ಞಾನಿಯಾಗಿದ್ದ ಪ್ರದೀಪ್ ಕುರುಲ್ಕರ್ ಅವರು ತಮ್ಮ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡರು. ಶತ್ರು ದೇಶದೊಂದಿಗೆ ಮುಖ್ಯವಾದ ಮಾಹಿತಿಗಳನ್ನು ಹಂಚಿಕೊಳ್ಳುವುದರಿಂದ ಅದು ನಮ್ಮ ದೇಶದ ಭದ್ರತೆಗೆ ಅಪಾಯವನ್ನು ಉಂಟುಮಾಡಬಲ್ಲದು ಎಂದು ಗೊತ್ತಿದ್ದರೂ ಕೂಡ ಅವರು ಅತ್ಯಂತ ಸೂಕ್ಷ್ಮವಾದ ವಿಷಯಗಳನ್ನು ಶತ್ರುದೇಶದ ಏಜೆಂಟ್ ಜೊತೆ ಹಂಚಿಕೊಂಡಿದ್ದಾರೆ. ಇದು ಹನಿಟ್ರ್ಯಾಪ್ ಕೇಸ್ ಎಂದು ಅಂದಾಜಿಸಲಾಗಿದೆ. ತನಿಖೆ ನಡೆಸಲಾಗುತ್ತಿದೆ’ ಎಂದು ಎಟಿಎಸ್ ಹೇಳಿದೆ.
ಇದನ್ನೂ ಓದಿ: Bengaluru Honeytrap Case: ಬೆಂಗಳೂರಲ್ಲಿ ಹುಡುಗಿ ಛೂ ಬಿಟ್ಟು ಹನಿಟ್ರ್ಯಾಪ್; ಸುಲಿಗೆಕೋರರ ಬಂಧನ
‘ಪಾಕಿಸ್ತಾನದ ಗುಪ್ತಚರ ಸಿಬ್ಬಂದಿಯೊಂದಿಗೆ ಪ್ರದೀಪ್ ಕುರುಲ್ಕರ್ ಸಂಪರ್ಕದಲ್ಲಿದ್ದರು. ಧ್ವನಿ ಸಂದೇಶ, ವಿಡಿಯೊ ಕಾಲ್ ಮೂಲಕ ನಿರಂತರವಾಗಿ ಮಾತನಾಡುತ್ತಿದ್ದರು. ಸೋಷಿಯಲ್ ಮೀಡಿಯಾ ಸೈಟ್ನಲ್ಲಿ ಯುವತಿಯೊಬ್ಬಳ ಫೋಟೋ ನೋಡಿ, ಅವರು ಮರುಳಾಗಿ ಸಂಪರ್ಕ ಸಾಧಿಸಿದ್ದಾರೆ. ಆದರೆ ವಾಸ್ತವದಲ್ಲಿ ಅವರು ಮಾಹಿತಿ ನೀಡಿದ್ದು ಪಾಕಿಸ್ತಾನ ಗುಪ್ತಚರ ದಳದ ಸಿಬ್ಬಂದಿಗೆ. ಪ್ರದೀಪ್ ವಿರುದ್ಧ ಡಿಆರ್ಡಿಒ ದೂರು ನೀಡಿತ್ತು. ಪ್ರದೀಪ್ರನ್ನು ಬಂಧಿಸಿ, ಗುರುವಾರ ಕೋರ್ಟ್ಗೆ ಹಾಜರುಪಡಿಸಿದ್ದೇವೆ. ಕೋರ್ಟ್ ಮತ್ತೆ ಅವರನ್ನು ಎಟಿಎಸ್ ಕಸ್ಟಡಿಗೆ ಕೊಟ್ಟಿದೆ. ವಿಚಾರಣೆ ನಡೆಸಲಾಗುತ್ತಿದೆ’ ಎಂದೂ ಉಗ್ರ ವಿರೋಧಿ ದಳ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರದೀಪ್ ಕುರುಲ್ಕರ್ 1988ರಿಂದಲೂ ಡಿಆರ್ಡಿಒದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಮೊದಲು ಯುದ್ಧ ವಾಹನ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ ಚೆನ್ನೈ ವಿಭಾಗಕ್ಕೆ ಸೇರ್ಪಡೆಯಾಗಿದ್ದರು.