Site icon Vistara News

DRDO Test: ಡಿಆರ್‌ಡಿಒ ಮತ್ತೊಂದು ಸಾಧನೆ; ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿ

DRDO test

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಬುಧವಾರ ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸ್ ಸಿಸ್ಟಮ್‌ನ ಫೇಸ್‌-2ಕ್ಷಿಪಣಿಯ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ (DRDO Test). ಒಡಿಶಾ ಕರಾವಳಿಯ ಚಾಂದಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR)ನಿಂದ ಈ ಪರೀಕ್ಷಾರ್ಥ ಉಡಾವಣೆ ನಡೆದಿದೆ ಎನ್ನಲಾಗಿದೆ.

ಇನ್ನು ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ರಕ್ಷಣಾ ಸಚಿವಾಲಯ, ಹಂತ-II ಬ್ಯಾಲಿಸ್ಟಿಕ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಯಶಸ್ವಿಯಾಗಿ ಹಾರಾಟ-ಪರೀಕ್ಷೆ ಮಾಡಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಇಂದು ಹಂತ-II ಬ್ಯಾಲಿಸ್ಟಿಕ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಯಶಸ್ವಿ ಹಾರಾಟ ಪರೀಕ್ಷೆಗಾಗಿ DRDO ವನ್ನು ಅಭಿನಂದಿಸಿದ್ದಾರೆ ಮತ್ತು ಪರೀಕ್ಷೆಯು ನಮ್ಮ ಬ್ಯಾಲಿಸ್ಟಿಕ್ ಕ್ಷಿಪಣಿ ರಕ್ಷಣಾ ಸಾಮರ್ಥ್ಯವನ್ನು ಮತ್ತೊಮ್ಮೆ ಪ್ರದರ್ಶಿಸಿದೆ ಎಂದು ಹೇಳಿದ್ದಾರೆ.

ಈ ಕ್ಷಿಪಣಿಯನ್ನು ನಿನ್ನೆ ಸಂಜೆ 4:24ಗಂಟೆಗೆ ಚಾಂಧಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR)ನಿಂದ ಯಶಸ್ವಿ ಉಡಾವಣೆ ಮಾಡಲಾಯಿತು. ಕ್ಷಿಪಣಿ ಹಾರಾಟದ ಪರೀಕ್ಷೆಯ ಎಲ್ಲ ಹಂತಗಳು ನಿರೀಕ್ಷೆಯಂತೆ ನಡೆದವು. ಹಾರಾಟ ಮಾರ್ಗದ ಸಂಪೂರ್ಣ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ವಿವಿಧ ಸ್ಥಳಗಳಲ್ಲಿ ರಾಡಾರ್, ಎಲೆಕ್ಟ್ರೋ-ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ (Electro-Optical Tracking System) ಮತ್ತು ಟೆಲಿಮೆಟ್ರಿಯಂತಹ ಹಲವಾರು ಶ್ರೇಣಿ ಸಂವೇದಕಗಳನ್ನು ನಿಯೋಜಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಕ್ಷಿಪಣಿ ಪ್ರಯೋಗಾರ್ಥ ಪರೀಕ್ಷೆ ನಡೆಸಲಿದೆ. ಇದಕ್ಕೂ ಮುಂಚಿತವಾಗಿ ಒಡಿಶಾದ ಬಾಲಸೋರ್ ಜಿಲ್ಲಾಡಳಿತವು 10 ಹಳ್ಳಿಗಳಿಂದ 10,000 ಕ್ಕೂ ಹೆಚ್ಚು ಜನರನ್ನು ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡಿಆರ್‌ಡಿಒ ಕ್ಷಿಪಣಿ ಪರೀಕ್ಷೆಗೆ ಅಗತ್ಯವಾದ ಶ್ರೇಣಿಯ ಸಿದ್ಧತೆಯನ್ನು ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಲ್ಲಿ (ಐಟಿಆರ್) ಪೂರ್ಣಗೊಳಿಸಿದೆ ಎಂದು ರಕ್ಷಣಾ ಮೂಲಗಳು ಮಂಗಳವಾರ ತಿಳಿಸಿವೆ. ಐಟಿಆರ್‌ನ ಲಾಂಚ್ ಪ್ಯಾಡ್ ಸಂಖ್ಯೆ 3 ರಿಂದ ಪರೀಕ್ಷೆಯನ್ನು ನಡೆಸಲಾಗುತ್ತದೆ. ಏತನ್ಮಧ್ಯೆ, ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಗೂ ಮುನ್ನ ಲಾಂಚ್ ಪ್ಯಾಡ್‌ನ 3.5 ಕಿಮೀ ವ್ಯಾಪ್ತಿಯಲ್ಲಿರುವ 10 ಗ್ರಾಮಗಳಿಗೆ ಸೇರಿದ ಸುಮಾರು 10,581 ಜನರನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲು ಬಾಲಸೋರ್ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ ಎಂದು ಕಂದಾಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಡಿಆರ್‌ಡಿಒ ಏಪ್ರಿಲ್‌ 18ರಂದು ಒಡಿಶಾ ಕರಾವಳಿಯ ಚಾಂದಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR)ನಿಂದ ದೇಶೀಯ ತಂತ್ರಜ್ಞಾನದ ಕ್ರೂಸ್ ಕ್ಷಿಪಣಿ (ITCM)ಯ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ನಡೆಸಿತ್ತು. ವಿಶೇಷ ಎಂದರೆ ಇಡೀ ಕ್ಷಿಪಣಿ ವ್ಯವಸ್ಥೆಯನ್ನು ಬೆಂಗಳೂರಿನಲ್ಲಿರುವ ಡಿಆರ್‌ಡಿಒ ಸಂಗಸಂಸ್ಥೆಯಾದ ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಎಸ್ಟಾಬ್ಲಿಷ್‌ಮೆಂಟ್‌ (ADE) ಅಭಿವೃದ್ಧಿಪಡಿಸಿತ್ತು. ಜತೆಗೆ ಇತರ ಪ್ರಯೋಗಾಲಯಗಳು ಮತ್ತು ಉದ್ದಿಮೆಗಳೂ ಈ ಮಹತ್ತರ ಕಾರ್ಯದಲ್ಲಿ ಕೈ ಜೋಡಿಸಿವೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Abhyas Trial: ದೇಶದ ಕ್ಷಿಪಣಿ ವ್ಯವಸ್ಥೆಗೆ ಬಲ ತುಂಬುವ ‘ಅಭ್ಯಾಸ್’‌ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿ

Exit mobile version