ನವದೆಹಲಿ: ಶನಿವಾರ ಅರೆಬಿಯನ್ ಸಮುದ್ರದಲ್ಲಿ (Arabian Sea) ವ್ಯಾಪಾರಿ ಹಡಗಿನ (Merchant Ship) ಮೇಲೆ ಡ್ರೋನ್ ದಾಳಿ (Drone Attack) ನಡೆದಿದ್ದು, ಭಾರೀ ಸ್ಫೋಟದ ಸದ್ದು ಕೇಳಿ ಬಂದಿದೆ. ಈ ಘಟನೆಯಲ್ಲಿ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಈ ಹಡಗಿನಲ್ಲಿ 20 ಭಾರತೀಯ ಸಿಬ್ಬಂದಿ (Indian Crew) ಇದ್ದಾರೆ. ದಾಳಿಗೊಳಗಾದ ಹಡಗಿನತ್ತ ಭಾರತೀಯ ಕರಾವಳಿ ಕಾವಲು ಪಡೆಯ ನೌಕೆ ಧಾವಿಸಿದೆ. ಈ ದಾಳಿಯು ಪೋರ್‌ಬಂದರ್ ಕರಾವಳಿಯಿಂದ 217 ನಾಟಿಕಲ್ ಮೈಲ್ಸ್ ದೂರದಲ್ಲಿ ನಡೆದಿದೆ. ಮಂಗಳೂರು (Mangalore) ಕಡೆಗೆ ಬರುತ್ತಿದ್ದ ಈ ವ್ಯಾಪಾರಿ ಹಡಗಿನ ಮೇಲೆ ಡ್ರೋನ್ ದಾಳಿ ಯಾರು ನಡೆಸಿದ್ದಾರೆಂದು ಇನ್ನೂ ತಿಳಿದು ಬಂದಿಲ್ಲ.
ಕಚ್ಚಾ ತೈಲವನ್ನು ಹೊತ್ತ ಹಡಗು ಸೌದಿ ಅರೇಬಿಯಾದ ಬಂದರಿನಿಂದ ಮಂಗಳೂರು ಕಡೆಗೆ ಬರುತ್ತಿತ್ತು. ಭಾರತೀಯ ವಿಶೇಷ ಆರ್ಥಿಕ ವಲಯದಲ್ಲಿ ಗಸ್ತು ತಿರುಗುತ್ತಿದ್ದ ಕೋಸ್ಟ್ ಗಾರ್ಡ್ ಹಡಗು ಐಸಿಜಿಎಸ್ ವಿಕ್ರಮ್‌ಗೆ ಸಂಕಷ್ಟದಲ್ಲಿರುವ ವ್ಯಾಪಾರಿ ಹಡಗಿನ ಕಡೆಗೆ ಹೋಗುವಂತೆ ಸೂಚಿಸಲಾಗಿದೆ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ತೊಂದರೆಯಲ್ಲಿ ಸಿಲುಕಿರುವ ಹಡಗಿಗೆ ನೆರವು ನೀಡುವಂತೆ ಕೋಸ್ಟ್ ಗಾರ್ಡ್ ನೌಕೆಯು ಆ ಪ್ರದೇಶದಲ್ಲಿನ ಎಲ್ಲಾ ಹಡಗುಗಳಿಗೆ ಸೂಚಿಸಿದೆ.
ಎಎನ್ಐ ಸುದ್ದಿ ಸಂಸ್ದೆಯ ವರದಿಯ ಪ್ರಕಾರ ಡ್ರೋನ್ ದಾಳಿಯಿಂದ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯನ್ನು ನಂದಿಸಲಾಗದೆಯಾದರೂ ಹಡಗಿನ ಒಟ್ಟಾರೆ ಕಾರ್ಯನಿರ್ವಹಣೆಗೆ ಅಡ್ಡಿಯಾಗಿದೆ. ಹಾಗೆಯೇ ಹಡಗಿನಲ್ಲಿದ್ದ ಎಲ್ಲ ಸಿಬ್ಬಂದಿಯು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸೋಮವಾರ ಅಪಹರಣಕ್ಕೊಳಗಾದ ಮಾಲ್ಟಾ ಧ್ವಜದ ಸರಕು ಹಡಗಿನಿಂದ ಗಾಯಗೊಂಡ ನಾವಿಕನನ್ನು ಸ್ಥಳಾಂತರಿಸಲು ಭಾರತೀಯ ನೌಕಾಪಡೆಯು ಸಹಾಯ ಮಾಡಿದ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ. ಅರೇಬಿಯನ್ ಸಮುದ್ರದಲ್ಲಿ ಎಂವಿ ರುಯೆನ್ ಎಂಬ ಹಡಗನ್ನು ಆರು “ಕಡಲ್ಗಳ್ಳರು” ಅಕ್ರಮವಾಗಿ ಹತ್ತಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಇನ್ನಷ್ಟೇ ಹೆಚ್ಚಿನ ಮಾಹಿತಿಯು ಹೊರ ಬರಬೇಕಾಗಿದೆ.
ಈ ಸುದ್ದಿಯನ್ನೂ ಓದಿ: Drone Attack: ರಷ್ಯಾದ ಶಕ್ತಿಕೇಂದ್ರ ಮಾಸ್ಕೋ ಮೇಲೆ ಡ್ರೋನ್ ದಾಳಿ, ಸುರಕ್ಷಿತ ಸ್ಥಳಕ್ಕೆ ಜನರ ಸ್ಥಳಾಂತರ