Site icon Vistara News

ಪಾಕಿಸ್ತಾನದಿಂದ ಬಂದ ಮತ್ತೊಂದು ಡ್ರೋನ್​​; ಫೈರಿಂಗ್​ ಮಾಡಿ ಹೊಡೆದುರುಳಿಸಿದ ಗಡಿ ಭದ್ರತಾ ಪಡೆ ಸಿಬ್ಬಂದಿ

Drone Came From Pakistan shot down by BSF In Punjab

ಅಮೃತಸರ್​: ಪಾಕಿಸ್ತಾನದಿಂದ ಬಂದಿದ್ದ ಡ್ರೋನ್​​​ವೊಂದನ್ನು ಪಂಜಾಬ್​ನ ಅಮೃತಸರ್​​ ಜಿಲ್ಲೆಯಲ್ಲಿ ಗಡಿ ಭದ್ರತಾ ಪಡೆ ಸಿಬ್ಬಂದಿ (BSF) ಹೊಡೆದುರುಳಿಸಿದ್ದಾರೆ. ಚಹರಾಪುರ ಗ್ರಾಮದ ಬಳಿ, ಭಾರತದ ವಾಯುಪ್ರದೇಶದ ಮೇಲೆ ವಿಮಾನ ಹಾರಾಡುತ್ತಿತ್ತು. ಆಗ ಭದ್ರತಾ ಸಿಬ್ಬಂದಿ ಡ್ರೋನ್​​ನತ್ತ ಫೈರಿಂಗ್​ ಮಾಡಿದ್ದು, ಅದು ನೆಲಕ್ಕೆ ಉರುಳಿದೆ. ಕಳೆದ ಎರಡು ದಿನಗಳ ಹಿಂದೆಯೂ ಇದೇ ಪ್ರದೇಶಕ್ಕೆ ಪಾಕಿಸ್ತಾನದ ಡ್ರೋನ್​​ವೊಂದು ನುಸುಳಿತ್ತು.

ಭಾರತದಲ್ಲಿ ನೆಲೆಸಿರುವ ಉಗ್ರರಿಗಾಗಿ ಪಾಕಿಸ್ತಾನದಿಂದ ಡ್ರೋನ್​​ ಮೂಲಕ ಶಸ್ತ್ರಾಸ್ತ್ರಗಳನ್ನು ಕಳಿಸಲಾಗುತ್ತದೆ, ಅಲ್ಲದೆ, ಮಾದಕ ವಸ್ತುಗಳ ಸಾಗಣೆಗೂ ಡ್ರೋನ್​​ಗಳನ್ನು ವ್ಯಾಪಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಪಾಕ್​​ನಿಂದ ಪದೇಪದೇ ಡ್ರೋನ್​​ಗಳು ಭಾರತೀಯ ವಾಯುನೆಲೆ ಪ್ರವೇಶ ಮಾಡುತ್ತಿವೆ. ಹಾಗೇ, ಸೋಮವಾರ ರಾತ್ರಿಯೂ ಅಮೃತಸರ್​​ದ ಚಹರಾಪುರ ಗ್ರಾಮದ ಬಳಿ ಡ್ರೋನ್​​ ದೊಡ್ಡದಾಗಿ ಶಬ್ದ ಮಾಡುತ್ತ ಹಾರಾಡುತ್ತಿತ್ತು. ಆಗ ಅಲ್ಲಿನ ಬಿಎಸ್​ಎಫ್​ ಪಡೆಗಳು ಅಲರ್ಟ್​ ಆಗಿ, ಅದನ್ನು ಹಿಮ್ಮೆಟ್ಟಿಸಲು ಒಂದೇ ಸಮ ಗುಂಡು ಹಾರಿಸಲು ತೊಡಗಿದರು. ಆದರೆ ಗುಂಡು ಡ್ರೋನ್​ಗೆ ತಗುಲಿ, ಅದು ಕೆಳಗೆ ಬಿದ್ದು ಧ್ವಂಸಗೊಂಡಿದೆ ಎಂದು ಹೇಳಲಾಗಿದೆ. ಈ ಡ್ರೋನ್​​ನ ಕೆಳಭಾಗದಲ್ಲಿ ಅಳವಡಿಸಲಾಗಿದ್ದ ಪಾಲಿಥಿನ್​​ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಭಾರತಕ್ಕೆ ನುಸುಳುವ ಪಾಕಿಸ್ತಾನಿ ಡ್ರೋನ್​​ಗಳ ಸಂಖ್ಯೆ ಈ ವರ್ಷ ಹೆಚ್ಚಾಗಿದೆ. ಇಲ್ಲಿಯವರೆಗೆ ಸುಮಾರು 230 ಡ್ರೋನ್​​ಗಳು ಪಾಕ್​ನಿಂದ ಭಾರತಕ್ಕೆ ಬಂದಿವೆ. 2021ರಲ್ಲಿ ಈ ಸಂಖ್ಯೆ 104 ಆಗಿತ್ತು. 2020ರಲ್ಲಿ 77 ಡ್ರೋನ್​​ಗಳು ಮಾತ್ರ ಭಾರತದ ಭೂಪ್ರದೇಶ ಪ್ರವೇಶ ಮಾಡಿದ್ದವು. ಬಹುತೇಕ ಡ್ರೋನ್​​ಗಳು ಭಾರತೀಯ ಸೇನೆಯ ಗುಂಡಿಗೆ ಧ್ವಂಸಗೊಂಡಿವೆ.

ಇದನ್ನೂ ಓದಿ: Modi Security Breach | ಮೋದಿ ಗುಜರಾತ್‌ ರ‍್ಯಾಲಿ ವೇಳೆ ಡ್ರೋನ್‌ ಹಾರಾಟ, ಮೂವರ ಬಂಧನ, ಭದ್ರತಾ ವೈಫಲ್ಯ ವರದಿ

Exit mobile version