ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಒಂಥರಾ ಸವ್ಯಸಾಚಿ. ಪ್ರತಿಯೊಂದು ವಿಚಾರ, ತಂತ್ರಜ್ಞಾನವನ್ನು ಅತಿ ಶೀಘ್ರದಲ್ಲಿ ಅರಿತುಕೊಳ್ಳುವ ಜಾಣ್ಮೆ ಅವರಿಗಿದೆ. ಅಸ್ಖಲಿತವಾದ ಮಾತು, ಆಡಳಿತ ವ್ಯವಸ್ಥೆಯನ್ನು ಕಣ್ಣಳತೆಯಲ್ಲೇ ನಿಯಂತ್ರಿಸುವ ತಾಕತ್ತಿನ ಜತೆಗೆ ಹೊಸ ಬೆಳವಣಿಗೆಗಳಿಗೆ ತಕ್ಷಣ ಸ್ಪಂದಿಸುತ್ತಾರೆ. ಗುರುವಾರ ದೆಹಲಿಯ ಪ್ರಗತಿ ಮೈದಾನದಲ್ಲಿ ಆರಂಭಗೊಂಡ ಎರಡು ದಿನಗಳ ಭಾರತ್ ಡ್ರೋನ್ ಮಹೋತ್ಸವ-2022ರ ವೇಳೆ ತಾವೇ ಡ್ರೋನ್ ಹಾರಿಸುವ ಮೂಲಕ ಇದನ್ನು ಮತ್ತೊಮ್ಮೆ ಋಜುಪಡಿಸಿದ್ದಾರೆ.
ವೇದಿಕೆಯ ಮೇಲೆ ನಿಂತು ರಿಮೋಟ್ ಮೂಲಕ ಎದುರುಗಡೆ ಇದ್ದ ಡ್ರೋನ್‌ಗೆ ಚಾಲನೆ ನೀಡಿದ ಅವರು ಅದು ಮೇಲೇರುವುದನ್ನು ಕುತೂಹಲದಿಂದ ಗಮನಿಸಿದರು. ಎರಡು ಬಾರಿ ಅದನ್ನು ಮೇಲಿನಿಂದ ಇಳಿಸಿ ಏರಿಸಿದ ಬಳಿಕ ಸ್ವಸ್ಥಾನಕ್ಕೆ ತಂದು ನಿಲ್ಲಿಸಿದರು. ಯಾರ ನೆರವೂ ಇಲ್ಲದೆ ಈ ಆಪರೇಷನ್ ನಡೆಸಿದ ಅವರ ಚಾಕಚಕ್ಯತೆಯನ್ನು ಪಕ್ಕದಲ್ಲಿದ್ದ ನಾಗರಿಕ ವಿಮಾನ ಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಮೋದಿ ಅವರು ನಗುವಿನ ಪ್ರತಿಕ್ರಿಯೆ ನೀಡಿದರು.
ಪ್ರತಿ ಹೊಲಕ್ಕೊಂದು ಡ್ರೋನ್ ಇರಲಿ
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ ಮೋದಿ ಅವರು, ಡ್ರೋನ್ ತಂತ್ರಜ್ಞಾನದ ಬೆಳವಣಿಗೆಯಿಂದ ಕೃಷಿ ಮತ್ತು ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಮಟ್ಟದ ಲಾಭವಾಗಲಿದೆ ಎಂದು ಅಭಿಪ್ರಾಯಪಟ್ಟರು. ʻಸ್ವಾತಂತ್ರ್ಯದ ಅಮೃತ ಮಹೋತ್ಸವ ನಡೆಯುತ್ತಿರುವ ಈ ಹೊತ್ತಿನಲ್ಲಿ ನನಗೆ ಹಲವು ಕನಸುಗಳಿವೆ. ಈ ದೇಶದ ಪ್ರತಿಯೊಬ್ಬ ಗಂಡು/ಹೆಣ್ಣಿನ ಕೈಯಲ್ಲಿ ಮೊಬೈಲ್ ಇರಬೇಕು ಎಂದು ಬಯಸುತ್ತೇನೆ. ಜತೆಗೆ ಪ್ರತಿಯೊಂದು ಹೊಲದಲ್ಲೂ ಒಂದು ಡ್ರೋನ್ ಇರಬೇಕು, ಪ್ರತಿ ಮನೆಯೂ ಸಮೃದ್ಧಿಯನ್ನು ಪಡೆಯಬೇಕು,ʼʼ ಎಂದು ಹೇಳಿದರು.
ಡ್ರೋನ್ ತಂತ್ರಜ್ಞಾನದ ಬಗ್ಗೆ ದೇಶದಲ್ಲಿರುವ ಅತೀವ ಕುತೂಹಲವನ್ನು ಗಮನಿಸಿದ್ದೇನೆ. ಇದು ಉದ್ಯೋಗ ಸೃಷ್ಟಿಯ ಹೊಸ ವಲಯವಾಗಿ, ಗೇಮ್ ಚೇಂಜರ್ ಆಗಿ ಹೊರಹೊಮ್ಮುವ ಎಲ್ಲ ಸಾಧ್ಯತೆಗಳಿವೆ ಎಂದು ಮೋದಿ ಹೇಳಿದರು. ಡ್ರೋನ್ ತಂತ್ರಜ್ಞಾನದ ಅಭಿವೃದ್ಧಿಗೆ ಉತ್ತೇಜನ ನೀಡುವುದು ಉತ್ತಮ ಆಡಳಿತ ಮತ್ತು ಉತ್ತಮ ಜೀವನವನ್ನು ಒದಗಿಸುವ ಬದ್ಧತೆಯ ಒಂದು ಭಾಗವೂ ಹೌದು ಎಂದರು ಮೋದಿ.
ಕೇವಲ ಎರಡು-ಮೂರು ಕೆಜಿ ತೂಗುವ ಈ ಡ್ರೋನ್‌ಗಳು ಭಾರತದಲ್ಲಿ ಸ್ವಾವಲಂಬಿ ಗ್ರಾಮಗಳನ್ನು ಸೃಷ್ಟಿಸುವ ಸರಕಾರದ ಯೋಜನೆಗೆ ದೊಡ್ಡ ಮಟ್ಟದ ಸಹಾಯವನ್ನು ನೀಡಲಿವೆ ಎಂದು ಸಮಾರಂಭದಲ್ಲಿ ಭಾಗವಹಿಸಿದ್ದ ನಾಗರಿಕ ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದರು. ಮುಂದಿನ ಎರಡು ವರ್ಷಗಳ ಕಾಲ ದೇಶದಲ್ಲಿ ಡ್ರೋನ್‌ಗಳ ತಯಾರಿಕೆ ಮತ್ತು ಬಳಕೆಗೆ ಸಂಬಂಧಿಸಿ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಕೇಂದ್ರ ಸರಕಾರದ ಹನ್ನೆರಡು ಇಲಾಖೆಗಳು, ರಾಜ್ಯ ಸರಕಾರದ 14 ಇಲಾಖೆಗಳು ಡ್ರೋನ್ ಬಳಸುತ್ತಿವೆ ಎಂದರು.
ಇದನ್ನೂ ಓದಿ| 1 ಲಕ್ಷ ಡ್ರೋನ್ ಗಳಿಗೆ ಬೇಡಿಕೆಯಾಗಲಿದೆ ಎಂದ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯ