ನವದೆಹಲಿ: ಎನ್‌ಡಿಎ ಒಕ್ಕೂಟದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಹೆಸರಲ್ಲಿ ಹಲವಾರು ಟ್ವಿಟರ್ ಖಾತೆಗಳು ಹುಟ್ಟುಕೊಂಡಿವೆ. ಎಲ್ಲದರಲ್ಲೂ ಅವರ ಫೋಟೋಗಳೇ ಇವೆ. ಡಜನ್‌ಗಟ್ಟಲೆ ಇರುವ ಟ್ವಿಟರ್ ಖಾತೆಯಲ್ಲಿ, ಅವರ ನಿಜವಾದ ಟ್ವಿಟರ್ ಅಕೌಂಟ್ ಯಾವುದು? ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಎನ್‌ಡಿಎಯ ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಆಯ್ಕೆಯಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿ, ಟ್ವೀಟ್ ಮಾಡಿದ್ದರು. ಅದಕ್ಕೆ ದ್ರೌಪದಿ ಮುರ್ಮು ಹೆಸರಿನ ಟ್ವಿಟರ್ ಖಾತೆಯೊಂದರಿಂದ ಕೃತಜ್ಞತೆ ಸಲ್ಲಿಸಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನರೇಂದ್ರ ಮೋದಿಯವರನ್ನು ಟ್ಯಾಗ್ ಮಾಡಲಾಗಿತ್ತು. ಈ ಟ್ವಿಟರ್ ಅಕೌಂಟ್‌ಗೆ 31ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಇದೇ ದ್ರೌಪದಿ ಮುರ್ಮು ನಿಜವಾದ ಅಕೌಂಟ್ ಎಂದು ಅನೇಕರು ಭಾವಿಸಿದ್ದರು. ಆದರೆ ಸರ್ಚ್ ಮಾಡುತ್ತ ಹೋದರೆ ದ್ರೌಪದಿ ಮುರ್ಮು ಹೆಸರಿನ ಹತ್ತು-ಹಲವು ಅಕೌಂಟ್‌ಗಳು ಕಾಣಿಸುತ್ತ ಹೋಗುತ್ತಿವೆ. ಸಹಜವಾಗಿಯೇ ಗೊಂದಲ ಮೂಡಿದೆ.
ಫ್ಯಾಕ್ಟ್‌ಚೆಕ್ ಹೇಳೋದೇನು?
ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಹೆಸರಲ್ಲಿ ಸುಮಾರು ೧೭ ಟ್ವಿಟರ್ ಅಕೌಂಟ್ ಹುಟ್ಟಿಕೊಂಡ ಬೆನ್ನಲ್ಲೇ ಇಂಡಿಯಾ ಟುಡೆ ಮಾಧ್ಯಮದ AFWA (ಆ್ಯಂಟಿ ಫೇಕ್‌ನ್ಯೂಸ್ ವಾರ್ ರೂಮ್) ಈ ವಿಷಯವನ್ನು ಫ್ಯಾಕ್ಟ್‌ಚೆಕ್ (ಸತ್ಯಪರಿಶೀಲನೆ)ಗೆ ಒಳಪಡಿಸಿದೆ. ದ್ರೌಪದಿ ಮುರ್ಮು ಅವರ ನಿಜವಾದ ಟ್ವಿಟರ್ ಖಾತೆ ಯಾವುದು ಎಂಬುದನ್ನು ಸಮಗ್ರವಾಗಿ ಪರಿಶೀಲನೆಗೆ ಒಳಪಡಿಸಿದಾಗ, ʼಈಗಿರುವ ಯಾವುದೇ ಅಕೌಂಟ್‌ಗಳೂ ಅವರ ಅಧಿಕೃತ ಖಾತೆಗಳೇ ಅಲ್ಲ. ಮುಖ್ಯವಾಗಿ ದ್ರೌಪದಿ ಮುರ್ಮು ಅವರು ಟ್ವಿಟರ್‌ನ್ನೇ ಬಳಸುತ್ತಿಲ್ಲʼ ಎಂದು ಸತ್ಯ ಹೊರಬಿದ್ದಿದೆ.
ಸಾಮಾನ್ಯವಾಗಿ ಯಾವುದೇ ಕ್ಷೇತ್ರದ ಗಣ್ಯರ ಟ್ವಿಟರ್ ಖಾತೆಗಳಲ್ಲಿ ಹೆಸರಿನ ಮುಂದೆ ಒಂದು ನೀಲಿ ಬಣ್ಣದ ಮಾರ್ಕ್ ಇರುತ್ತದೆ. ಇದು ಟ್ವಿಟರ್ ಕೊಡುವ ವೆರಿಫಿಕೇಶನ್ ಬ್ಯಾಡ್ಜ್. ಗಣ್ಯರಾದ ಮಾತ್ರಕ್ಕೇ ಈ ಬ್ಯಾಡ್ಜ್ ಕೊಡುವುದಿಲ್ಲ ಅಥವಾ ಹೆಚ್ಚಿನ ಫಾಲೋವರ್ಸ್ ಆದ ತಕ್ಷಣವೂ ದೊರೆಯುವುದಿಲ್ಲ. ಈ ಮಾರ್ಕ್ ಪಡೆಯಲು ಹಲವು ಮಾನದಂಡಗಳು ಇವೆ. ಎಲ್ಲಕ್ಕಿಂತ ಮುಖ್ಯವಾಗಿ, ಬ್ಯಾಡ್ಜ್ ಪಡೆಯುವವರ ಟ್ವಿಟರ್ ಅಕೌಂಟ್ ಆರು ತಿಂಗಳಿಂದ ಸಕ್ರಿಯವಾಗಿರಬೇಕಾಗುತ್ತದೆ. ಟ್ವಿಟರ್ ನಿಯಮಗಳನ್ನು ಒಮ್ಮೆಯೂ ಉಲ್ಲಂಘಿಸಿರಬಾರದು ಎಂಬಿತ್ಯಾದಿ ನಿಯಮಗಳು ಇವೆ.
ಇದನ್ನೂ ಓದಿ: ಎನ್‌ಡಿಎ ಒಕ್ಕೂಟದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಕೆ; ಪ್ರಧಾನಿ ಮೋದಿ ಉಪಸ್ಥಿತಿ
ಆದರೆ ದ್ರೌಪದಿ ಮುರ್ಮು ಹೆಸರಿನಲ್ಲಿ ಕ್ರಿಯೇಟ್ ಆದ ಯಾವುದೇ ಟ್ವಿಟರ್ ಅಕೌಂಟ್‌ಗಳಿಗೂ ಈ ವೆರಿಫಿಕೇಶನ್ ಮಾರ್ಕ್ ಇಲ್ಲ. ಹೀಗಾಗಿ ಅದನ್ನು ಫ್ಯಾಕ್ಟ್‌ಚೆಕ್‌ಗೆ ಒಳಪಡಿಸಲು ನಿರ್ಧರಿಸಿದ AFWA ಸಿಬ್ಬಂದಿ, ಮೊಟ್ಟ ಮೊದಲು ಫೋನ್ ಮಾಡಿದ್ದು ಒಡಿಶಾದಲ್ಲಿರುವ ದ್ರೌಪದಿ ಮುರ್ಮು ಅವರ ಕಚೇರಿಗೆ. ಈ ಕರೆಯನ್ನು ಸ್ವೀಕರಿದ ದ್ರೌಪದಿ ಮುರ್ಮು ಆಪ್ತ ಸಹಾಯಕ ಸೂರಜ್ ಕುಮಾರ್ ಮಹತೋ ” ಇದೀಗ ದ್ರೌಪದಿ ಮುರ್ಮು ಹೆಸರಲ್ಲಿ ಇರುವ ಅಕೌಂಟ್‌ಗಳೆಲ್ಲ ನಕಲಿ. ಯಾಕೆಂದರೆ ಅವರು ಇದುವರೆಗೆ ಟ್ವಿಟರ್ ಖಾತೆ ಹೊಂದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ನರೇಂದ್ರ ಮೋದಿ ಟ್ಯಾಗ್ ಮಾಡಿರಲಿಲ್ಲ
ಇನ್ನೊಂದು ಪ್ರಮುಖವಾದ ವಿಷಯವೆಂದರೆ, ಜೂ.21ರಂದು ಪ್ರಧಾನಿ ನರೇಂದ್ರ ಮೋದಿ ದ್ರೌಪದಿ ಮುರ್ಮು ಅವರಿಗೆ ಅಭಿನಂದನೆ ಸಲ್ಲಿಸುವಾಗ ಯಾವುದೇ ಟ್ವಿಟರ್ ಅಕೌಂಟ್‌ನ್ನೂ ಟ್ಯಾಗ್ ಮಾಡಿರಲಿಲ್ಲ. ನರೇಂದ್ರ ಮೋದಿ ಯಾರಿಗೇ ಹಾರೈಸಲಿ, ಅಭಿನಂದನೆ ಸಲ್ಲಿಸಲಿ ಅವರ ಟ್ವಿಟರ್ ಅಕೌಂಟ್ ಟ್ಯಾಗ್ ಮಾಡುತ್ತಾರೆ. ಆದರೆ ದ್ರೌಪದಿ ಮುರ್ಮು ಅಕೌಂಟ್ ಇಲ್ಲದ ಕಾರಣಕ್ಕೇ ಅವರು ಟ್ಯಾಗ್ ಮಾಡಿರಲಿಲ್ಲ. ಇದರಲ್ಲೇ ಸ್ಪಷ್ಟವಾಗುತ್ತದೆ ಅವರು ಟ್ವಿಟರ್ ಅಕೌಂಟ್ ಹೊಂದಿಲ್ಲ ಎಂಬುದು..!
ಇದನ್ನೂ ಓದಿ: ವಿಸ್ತಾರ Fact Check | ಕಾರಿನ ಗಾಜು ಒರೆಸಿದ ಹುಡುಗ FASTagನಿಂದ ಹಣ ಲಪಟಾಯಿಸಿದನೇ?