Site icon Vistara News

Presidential Election | ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಇಂದು ನಾಮಪತ್ರ ಸಲ್ಲಿಕೆ

draupadi murmu

ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಆಗಿರುವ ಜಾರ್ಖಂಡ್‌ನ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು ಅವರು ಇಂದು (ಜೂನ್‌ ೨೪) ನಾಮಪತ್ರ ಸಲ್ಲಿಸಲಿದ್ದಾರೆ.

ಜೆಡಿಯು, ಬಿಜೆಡಿ ಬೆಂಬಲ ಘೋಷಿಸುವುದರೊಂದಿಗೆ ಎನ್‌ಡಿಎ ಅಭ್ಯರ್ಥಿಗೆ ಶೇ.೫೨ಕ್ಕೂ ಹೆಚ್ಚು ಮತಗಳ ಬೆಂಬಲ ಲಭಿಸಿದಂತಾಗಿದ್ದು, ದೇಶದ ಮೊಟ್ಟ ಮೊದಲ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ರಾಷ್ಟ್ರಪತಿ ಪದವಿ ಗಳಿಸಿದಂತಾಗಲಿದೆ. ಅವರು ವಿಜೇತರಾದರೆ ೧೬ನೇ ರಾಷ್ಟ್ರಪತಿಯಾಗಲಿದ್ದಾರೆ.

ಜುಲೈ ೧೮ರಂದು ಮತದಾನ ನಡೆಯಲಿದೆ. ೨೦೧೭ರಲ್ಲಿ ಕಳೆದ ಬಾರಿಯ ಚುನಾವಣೆ ನಡೆದಿತ್ತು. ಎನ್‌ಡಿಎ ಅಭ್ಯರ್ಥಿ ರಾಮ್‌ ನಾಥ್‌ ಕೋವಿಂದ್‌ ಅವರು ಯುಪಿಎ ಅಭ್ಯರ್ಥಿ ಮೀರಾ ಕುಮಾರ್‌ ಅವರನ್ನು ಸೋಲಿಸಿದ್ದರು.

ನವೀನ್‌ ಪಟ್ನಾಯಕ್‌ ಪಕ್ಷದ ಬೆಂಬಲದೊಂದಿಗೆ ಎನ್‌ಡಿಎ ಅಭ್ಯರ್ಥಿಗೆ ೫,೬೭,೦೦೦ ಮತಗಳು ಲಭಿಸಿದಂತಾಗಿದೆ. ಒಟ್ಟು ಮತಗಳ ಸಂಖ್ಯೆ ೧೦,೮೬,೪೩೧ ಆಗಿದೆ. ಇದರಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಸಂಸದರಿಗೆ ೩,೦೮,೦೦೦ ಮತಗಳು ಇವೆ. ಬೆಜೆಡಿ ೩೨,೦೦೦ ಮತಗಳನ್ನು ಒಳಗೊಂಡಿದೆ. ಒಡಿಶಾದಲ್ಲಿ ಆಡಳಿತಾರೂಢವಾಗಿರುವ ಬಿಜೆಡಿ ೧೧೪ ಶಾಸಕರು, ೧೨ ಸಂಸದರನ್ನು ಒಳಗೊಂಡಿದೆ. ಎಐಎಡಿಎಂಕೆ, ವೈಎಸ್‌ಆರ್‌ಸಿಪಿ ಸೇರಿದಂತೆ ಕೆಲವು ಪ್ರಾದೇಶಿಕ ಪಕ್ಷಗಳ ಬೆಂಬಲವೂ ದ್ರೌಪದಿ ಮುರ್ಮು ಅವರಿಗೆ ಲಭಿಸುವ ನಿರೀಕ್ಷೆ ಇದೆ.

ಬಿಜೆಪಿಯು ಲೋಕಸಭೆಯಲ್ಲಿ ೩೦೧ ಸಂಸದರನ್ನು ಹಾಗೂ ರಾಜ್ಯಸಭೆಯಲ್ಲಿ ೯೨ ಸದಸ್ಯರನ್ನು ಒಳಗೊಂಡಿದೆ. ಉಭಯ ಸದನಗಳಲ್ಲಿ ಒಟ್ಟು ಸದಸ್ಯರ ಸಂಖ್ಯೆ ೭೭೬. ರಾಜ್ಯಗಳಲ್ಲಿನ ೪,೦೩೩ ಶಾಸಕರು ಕೂಡ ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ಉತ್ತರಪ್ರದೇಶದಿಂದ ಬಿಜೆಪಿಗೆ ಅತಿ ಹೆಚ್ಚು ಮತಗಳು ದೊರೆಯಲಿವೆ. (೫೬,೭೮೪) ಅಲ್ಲಿ ಪಕ್ಷದ ೨೭೩ ಶಾಸಕರು ಇದ್ದಾರೆ. ಬಿಹಾರದಲ್ಲಿ ಎನ್‌ಡಿಎಯ ೧೨೭ ಶಾಸಕರಿದ್ದು, ಎರಡನೇ ಗರಿಷ್ಠ ಮತಗಳು ದೊರೆಯಲಿದೆ.

ಮತ್ತೊಂದು ಕಡೆ ಯುಪಿಎ ತನ್ನ ಕೈಯಲ್ಲಿ ೧,೫೦,೦೦೦ ಮತಗಳನ್ನು ಹೊಂದಿದೆ. ಯುಪಿಎ ಅಭ್ಯರ್ಥಿ ಯಶ್ವಂತ್‌ ಸಿನ್ಹಾ.

Exit mobile version