Site icon Vistara News

Amit Shah: ಡ್ರಗ್ಸ್‌ ವಿರುದ್ಧ ಸಮರ; ಅಮಿತ್‌ ಶಾ ನೇತೃತ್ವದಲ್ಲಿ 2,400 ಕೋಟಿ ರೂ. ಮೌಲ್ಯದ ಮಾದಕವಸ್ತು ನಾಶ

Amit Shah Observe Drugs Destroying Drive

Drugs Worth RS 2,400 Crore Destroyed, Amit Shah Watches Virtually

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ನೇತೃತ್ವದಲ್ಲಿ ದೇಶಾದ್ಯಂತ ಸುಮಾರು 2,416 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ಅನ್ನು ನಾಶಪಡಿಸಲಾಗಿದೆ. ದೆಹಲಿಯಲ್ಲಿ ಅಮಿತ್‌ ಶಾ ನೇತೃತ್ವದಲ್ಲಿ “ಮಾದಕವಸ್ತು ಸಾಗಣೆ ಹಾಗೂ ರಾಷ್ಟ್ರೀಯ ಭದ್ರತೆ” ಕುರಿತ ಪ್ರಾದೇಶಿಕ ಸಭೆ ನಡೆಸಿದರು. ಇದೇ ವೇಳೆ ಅವರು ದೇಶಾದ್ಯಂತ 1.44 ಲಕ್ಷ ಕೆ.ಜಿ ಮಾದಕವಸ್ತು ನಾಶಪಡಿಸುವುದನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ವೀಕ್ಷಿಸಿದರು.

ದೇಶದಲ್ಲಿ ಡ್ರಗ್ಸ್‌ ನಿಗ್ರಹ ದಿಸೆಯಲ್ಲಿ ಮಾದಕವಸ್ತು ನಿಯಂತ್ರಣ ಬ್ಯೂರೋ (NCB)ದ ಆಯಾ ರಾಜ್ಯಗಳ ಘಟಕಗಳು ದಾಳಿ ನಡೆಸಿ ಅಪಾರ ಪ್ರಮಾಣದ ಡ್ರಗ್ಸ್‌ ವಶಪಡಿಸಿಕೊಂಡಿವೆ. ಹೈದರಾಬಾದ್‌ ಎನ್‌ಸಿಬಿಯು 6,590 ಕೆ.ಜಿ ಮಾದಕವಸ್ತುವನ್ನು ಸೋಮವಾರ ನಾಶಪಡಿಸಿದೆ. ಅದರಂತೆ, ಇಂದೋರ್‌ ಎನ್‌ಸಿಬಿ ಘಟಕ 822 ಕೆ.ಜಿ, ಜಮ್ಮು 356 ಕೆ.ಜಿ, ಅಸ್ಸಾಂ 229 ಕೆ.ಜಿ, ಗುಜರಾತ್ 4,277 ಕೆ.ಜಿ‌, ಹರಿಯಾಣ 2,458 ಕೆ.ಜಿ, ಮಹಾರಾಷ್ಟ್ರ 1,803 ಕೆ.ಜಿ ಹಾಗೂ ಉತ್ತರ ಪ್ರದೇಶ ಎನ್‌ಸಿಬಿ ಘಟಕವು 4,049 ಕೆ.ಜಿ ಡ್ರಗ್ಸ್‌ ವಶಪಡಿಸಿಕೊಂಡಿದ್ದು, ಇಷ್ಟನ್ನೂ ನಾಶಪಡಿಸಲಾಯಿತು.

ಸಭೆ ನಡೆಸಿದ ಅಮಿತ್‌ ಶಾ

“ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶವನ್ನು ಮಾದಕವಸ್ತು ಮುಕ್ತಗೊಳಿಸಲು ತೀರ್ಮಾನಿಸಿದೆ. ಅದರಂತೆ, ಸಾವಿರಾರು ಕೋಟಿ ರೂ. ಮೌಲ್ಯದ ಡ್ರಗ್ಸ್‌ ವಶಪಡಿಸಿಕೊಂಡು, ಅದನ್ನು ನಾಶಪಡಿಸಲಾಗಿದೆ. 2022ರ ಜೂನ್‌ 1ರಿಂದ 2023ರ ಜುಲೈ ಅವಧಿಯಲ್ಲಿ ಎನ್‌ಸಿಬಿಯ ಪ್ರಾದೇಶಿಕ ಘಟಕಗಳು ವಶಪಡಿಸಿಕೊಂಡ 8.76 ಲಕ್ಷ ಕೆ.ಜಿ ಅಂದರೆ, 9,580 ಕೋಟಿ ರೂ. ಮೌಲ್ಯದ ಡ್ರಗ್ಸ್‌ಅನ್ನು ನಾಶಪಡಿಸಲಾಗಿದೆ. ಇದು ನಿಗದಿತ ಗುರಿಗಿಂತ 11 ಪಟ್ಟು ಕಡಿಮೆಯಾಗಿದೆ” ಎಂದು ಸರ್ಕಾರ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: Drugs Menace: ಡ್ರಗ್ಸ್ ಹಾವಳಿ ತಡೆಗೆ ವಿಶೇಷ ತಂಡ ರಚಿಸಲು ಸಿಎಂ ಸಿದ್ದರಾಮಯ್ಯ ಸೂಚನೆ

ದೇಶಾದ್ಯಂತ ಒಂದು ವರ್ಷದಲ್ಲಿ 10 ಲಕ್ಷ ಕೆ.ಜಿ ಮಾದಕವಸ್ತುವನ್ನು ನಾಶಪಡಿಸಲಾಗಿದೆ. ಇದರ ಒಟ್ಟು ಮೌಲ್ಯವು 12 ಸಾವಿರ ಕೋಟಿ ರೂ. ಆಗಿದೆ. ಇದೇ ರೀತಿ ಮುಂದಿನ ದಿನಗಳಲ್ಲೂ ಡ್ರಗ್ಸ್‌ ನಿಗ್ರಹಕ್ಕೆ ಕ್ರಮ ತೆಗೆದುಕೊಳ್ಳುವುದಾಗಿ ಸರ್ಕಾರ ಮಾಹಿತಿ ನೀಡಿದೆ. “ದೇಶವನ್ನು ಮಾದಕವಸ್ತು ಮುಕ್ತಗೊಳಿಸಲು ಕೇಂದ್ರ ಸರ್ಕಾರ ಪಣತೊಟ್ಟಿದೆ. ಅದರಂತೆ ಮುಂದಿನ ದಿನಗಳಲ್ಲೂ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದು ಅಮಿತ್‌ ಶಾ ಹೇಳಿದರು.

Exit mobile version