ನವದೆಹಲಿ: ವಿಮಾನಗಳಲ್ಲಿ ಹಾರಾಟ ಮಾಡುವವರು ಸಭ್ಯರು, ಸುಶಿಕ್ಷಿತರು ಎಂಬ ಭಾವನೆ ಜನರಲ್ಲಿದೆ. ಬಹುತೇಕ ಜನ ಹಾಗೆಯೇ ಇರುತ್ತಾರೆ. ಆದರೆ, ಇತ್ತೀಚೆಗೆ ವಿಮಾನಗಳಲ್ಲಿ ಅಸಭ್ಯ ವರ್ತನೆ ಜಾಸ್ತಿಯಾಗಿದೆ. ಅದರಲ್ಲೂ, ಶಂಕರ್ ಮಿಶ್ರಾ ಎಂಬಾತ ಮಹಿಳೆಯೊಬ್ಬರ ಮೇಲೆಯೇ ಮೂತ್ರ ವಿಸರ್ಜನೆ ಮಾಡಿದ ಪ್ರಕರಣ ದೇಶಾದ್ಯಂತ ಸುದ್ದಿಯಾಗಿದೆ. ಇದರ ಬೆನ್ನಲ್ಲೇ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕುಡುಕನೊಬ್ಬ ಪ್ರಯಾಣಿಕರ ಎದುರೇ ಮೂತ್ರ ವಿಸರ್ಜನೆ ಮಾಡುವ ಮೂಲಕ ಉದ್ಧಟತನ (Man Urinates At IGI Airport) ಮಾಡಿದ್ದಾನೆ.
ವಿಮಾನ ನಿಲ್ದಾಣದ ಮೂರನೇ ಟರ್ಮಿನಲ್‌ನ ಡಿಪಾರ್ಚರ್ ಗೇಟ್ ಬಳಿ ಜನಸಂದಣಿಯನ್ನೂ ಗಮನಿಸದೆ ಜೌಹಾರ್ ಅಲಿ ಖಾನ್ ಎಂಬಾತ ಕುಡಿದ ಮತ್ತಿನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಹಾಗೆಯೇ, ಸಹ ಪ್ರಯಾಣಿಕರ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ. ಅಶ್ಲೀಲ ಪದಗಳನ್ನು ಬಳಸಿದ್ದಾನೆ. ಇದಾದ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಡಿಪಾರ್ಚರ್ ಗೇಟ್ ಬಳಿ ದೆಹಲಿಯಿಂದ ದಮನ್‌ಗೆ ಹೊರಟಿದ್ದ ವಿಮಾನ ಹತ್ತಲು ಪ್ರಯಾಣಿಕರು ಸಾಲಾಗಿ ನಿಂತಿದ್ದರು. ಇದೇ ವೇಳೆ ವ್ಯಕ್ತಿಯು ಅಸಭ್ಯವಾಗಿ ವರ್ತಿಸಿದ್ದಾನೆ. ಹಿರಿಯ ಭದ್ರತಾ ಅಧಿಕಾರಿಯೊಬ್ಬರು ದೂರು ನೀಡಿದ ಹಿನ್ನೆಲೆಯಲ್ಲಿ ವ್ಯಕ್ತಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರು ವಿಚಾರಣೆ ನಡೆಸಿ, ಎಫ್‌ಐಆರ್ ದಾಖಲಿಸಿದ ಬಳಿಕವೇ ಆತನ ನಶೆ ಇಳಿಯಿತು ಎಂದು ತಿಳಿದುಬಂದಿದೆ.
ಇದನ್ನೂ ಓದಿ | 50 ಪ್ರಯಾಣಿಕರನ್ನು ನಿಲ್ದಾಣದಲ್ಲೇ ಬಿಟ್ಟು ಟೇಕಾಫ್ ಆದ ವಿಮಾನ!