ಪಾಟ್ನಾ: ಒಮ್ಮೆ ಜೈಲಿನ ಮೆಟ್ಟಿಲು ಹತ್ತಿ ಬಂದರೆ ಜೀವನ ಹಾಳಾಗುತ್ತದೆ ಎನ್ನುವ ಮಾತಿದೆ. ಆದರೆ ಇಲ್ಲೊಬ್ಬ ವ್ಯಕ್ತಿಗೆ ಜೈಲಿನ ಮೆಟ್ಟಿಲನ್ನು ಹತ್ತಿದ ಮೇಲೇ ಅದೃಷ್ಟ (Drunk Singer) ಹುಡುಕಿಕೊಂಡು ಬಂದಿದೆ.
ಬಿಹಾರದಲ್ಲಿ ಇತ್ತೀಚೆಗೆ ಕನ್ಹಯ್ಯ ಕುಮಾರ್(24) ಹೆಸರಿನ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಿಹಾರ ಸಂಪೂರ್ಣವಾಗಿ ಮದ್ಯಪಾನ ಮುಕ್ತ ರಾಜ್ಯ. ಬೇರೆ ರಾಜ್ಯಗಳಿಂದ ಬರುವವರಿಗೂ ಮದ್ಯಪಾನ ಮಾಡಿಕೊಂಡು ಬರಬಾರದು ಎನ್ನುವ ನಿಯಮವಿದೆ. ಆದರೆ ಇತ್ತೀಚೆಗೆ ಉತ್ತರ ಪ್ರದೇಶಕ್ಕೆ ಕೆಲಸಕ್ಕೆಂದು ಹೋಗಿದ್ದ ಬಿಹಾರ ಮೂಲದ ಕನ್ಹಯ್ಯ ವಾಪಸು ಮನೆಗೆ ಬರುವಾಗ ಮದ್ಯಪಾನ ಮಾಡಿಕೊಂಡು ಬಂದಿದ್ದಾನೆ.
ಇದನ್ನೂ ಓದಿ: Football Viral Video| ಫುಟ್ಬಾಲ್ ಮೈದಾನದಲ್ಲೇ ಆಟಗಾರರ ಫೈಟಿಂಗ್; ವಿಡಿಯೊ ವೈರಲ್
ಆತ ಗಡಿ ಜಿಲ್ಲೆಯಾಗಿರುವ ಕೈಮೂರಿಗೆ ಪ್ರವೇಶಿಸುತ್ತಿದ್ದಂತೆಯೇ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಈ ರೀತಿ ನಿಯಮ ಉಲ್ಲಂಘಿಸಿ ಜೈಲು ಸೇರಿದ ಕನ್ಹಯ್ಯ ಜೈಲಿನಲ್ಲಿದ್ದಾಗ ಕುಡಿದ ಮತ್ತಿನಲ್ಲೇ ಹಾಡೊಂದನ್ನು ಹೇಳಿದ್ದಾನೆ. ಲಯಬದ್ಧವಾಗಿ ಹಾಡು ಹೇಳಿದ ಆತನ ವಿಡಿಯೊವನ್ನು ಅಲ್ಲಿದ್ದವರು ಚಿತ್ರೀಕರಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋ ಕೆಲವೇ ಗಂಟೆಗಳಲ್ಲಿ ಭಾರೀ ವೈರಲ್ ಆಗಿದೆ. ಕನ್ಹಯ್ಯ ಅವರ ಸಂಗೀತ ಜ್ಞಾನಕ್ಕೆ ಎಲ್ಲರೂ ತಲೆದೂಗಿದ್ದಾರೆ. ಈ ವಿಡಿಯೊ ಬಾಲಿವುಡ್ ಮಂದಿಯನ್ನೂ ಸೆಳೆದಿದೆ. ಈ ಪ್ರತಿಭೆಗೆ ಅವಕಾಶ ಕೊಡಲು ಹಲವರು ಮುಂದೆ ಬಂದಿದ್ದಾರೆ. ಆಶಿಕಿ-2 ಸಿನಿಮಾ ಖ್ಯಾತಿಯ ಸಂಗೀತ ನಿರ್ದೇಶಕ ಅಂಕಿತ್ ತಿವಾರಿ ಅವರು ಕನ್ಹಯ್ಯ ಬಳಿ ಹಾಡೊಂದನ್ನು ಹೇಳಿಸುವುದಾಗಿ ಹೇಳಿದ್ದಾರೆ. “ಚಟ ಎನ್ನುವುದು ಒಂದು ದೆವ್ವದ ರೀತಿಯಲ್ಲಿ. ಆದರೆ ಕಲೆಗೆ ಈ ದೆವ್ವವನ್ನು ಗೆಲ್ಲುವ ಶಕ್ತಿಯಿದೆ” ಎಂದು ಅವರು ಹೇಳಿದ್ದಾರೆ. ಹಾಗೆಯೇ ಉತ್ತರ ಪ್ರದೇಶದ ಸ್ಥಳೀಯ ಸಂಗೀತ ಸಂಸ್ಥೆಯೊಂದು ಕೂಡ ಕನ್ಹಯ್ಯನಿಂದ ಹಾಡು ಹೇಳಿಸಲು ಮುಂದಾಗಿದೆ. ಸದ್ಯ ಕನ್ಹಯ್ಯ ಸರ್ಕಾರಕ್ಕೆ ದಂಡ ಕಟ್ಟಿ, ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದಾರೆ. ಕನ್ಹಯ್ಯ ಅವರು ತಮ್ಮ ಮುಂದಿರುವ ಅವಕಾಶಗಳನ್ನು ಬಳಸಿಕೊಂಡು ಎತ್ತರಕ್ಕೆ ಬೆಳೆಯುತ್ತಾರೆಯೇ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕಿದೆ.