Site icon Vistara News

DUSU Election: ದೆಹಲಿ ವಿವಿಯಲ್ಲಿ ಎಬಿವಿಪಿ ದರ್ಬಾರ್;‌ ಚುನಾವಣೆಯಲ್ಲಿ ಭಾರಿ ಗೆಲುವು, ದೇಶ ಮೊದಲು ಎಂದ ಬಿಜೆಪಿ

DUSU Election Result

DUSU Election Result: ABVP wins three central panel seats, NSUI bags vice president post

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಒಕ್ಕೂಟದ (DUSU) ಚುನಾವಣೆಯಲ್ಲಿ (DUSU Election) ಎಬಿವಿಪಿ (ABVP) ಭರ್ಜರಿ ಗೆಲುವು ಸಾಧಿಸಿದೆ. ಡಿಯುಎಸ್‌ಯು ಅಧ್ಯಕ್ಷ ಸೇರಿ ಕೇಂದ್ರೀಯ ಸಮಿತಿ ನಾಲ್ಕು ಪ್ರಮುಖ ಹುದ್ದೆಗಳಲ್ಲಿ ಮೂರು ಹುದ್ದೆಗಳು ಆರ್‌ಎಸ್‌ಎಸ್‌ ವಿದ್ಯಾರ್ಥಿ ಘಟಕವಾದ ಎಬಿವಿಪಿ ಪಾಲಾದರೆ, ಉಪಾಧ್ಯಕ್ಷ ಸ್ಥಾನವು ಕಾಂಗ್ರೆಸ್‌ ವಿದ್ಯಾರ್ಥಿ ಘಟಕವಾದ ಎನ್‌ಎಸ್‌ಯುಐ ಪಾಲಾಗಿದೆ.

ಎಬಿವಿಪಿಯ ತುಷಾರ್‌ ದೆಢಾ ಅವರು ಎನ್‌ಎಸ್‌ಯುಐನ ಹಿತೇಶ್‌ ಗುಲಿಯಾ ವಿರುದ್ಧ ಗೆಲುವು ಸಾಧಿಸಿದ್ದಾರೆ. ಎನ್‌ಎಸ್‌ಯುಐನ ಅಭಿ ದಾಹಿಯಾ ಡಿಯುಎಸ್‌ಯು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಾಗೆಯೇ, ಎಬಿವಿಪಿಯ ಅಪರಾಜಿತಾ ಕಾರ್ಯದರ್ಶಿ ಹಾಗೂ ಸಚಿನ್‌ ಬೈಸ್ಲಾ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ದೆಹಲಿ ವಿವಿಯಲ್ಲಿ ಇನ್ನು ಎಬಿವಿಪಿ ಮತ್ತಷ್ಟು ಪ್ರಬಲವಾಗಿದೆ.

3 ವರ್ಷದ ಬಳಿಕ ಚುನಾವಣೆ

ದೆಹಲಿ ವಿವಿಯಲ್ಲಿ 2019ರಲ್ಲಿ ನಡೆದ ಚುನಾವಣೆಯಲ್ಲೂ ಎಬಿವಿಪಿಯು ನಾಲ್ಕು ಪ್ರಮುಖ ಹುದ್ದೆಗಳಲ್ಲಿ ಮೂರು ಹುದ್ದೆಗಳನ್ನು ಪಡೆದಿತ್ತು. ಇದಾದ ಬಳಿಕ ಕೊರೊನಾ ಹಿನ್ನೆಲೆಯಲ್ಲಿ 2020 ಹಾಗೂ 2021ರಲ್ಲಿ ಡಿಯುಎಸ್‌ಯು ಚುನಾವಣೆ ನಡೆದಿರಲಿಲ್ಲ. ಅಕಾಡೆಮಿಕ್‌ ಕ್ಯಾಲೆಂಡರ್‌ನಲ್ಲಿ ಏರುಪೇರಾದ ಕಾರಣ 2022ರಲ್ಲೂ ಡಿಯುಎಸ್‌ಯು ಚುನಾವಣೆ ನಡೆದಿರಲಿಲ್ಲ. ಈ ಬಾರಿಯ ಚುನಾವಣೆಯಲ್ಲಿ 24 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಎಬಿವಿಪಿ ಸಂಭ್ರಮಾಚರಣೆ, ಅಮಿತ್‌ ಶಾ ಅಭಿನಂದನೆ

ಡಿಯುಎಸ್‌ಯು ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ವಿವಿ ಕ್ಯಾಂಪಸ್‌ನಲ್ಲಿ ಎಬಿವಿಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಪಟಾಕಿ ಸಿಡಿಸಿ, ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದರು. ಇನ್ನು ಎಬಿವಿಪಿ ಗೆಲುವಿನ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿ ಬಿಜೆಪಿಯ ಹಲವು ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ. ಹಾಗೆಯೇ, ದೇಶದ ಹಿತಾಸಕ್ತಿ ಮೊದಲು ಎಂಬ ಉದ್ದೇಶದಿಂದ ಎಬಿವಿಪಿ ಕಾರ್ಯನಿರ್ವಹಿಸಲಿದೆ ಎಂದಿದ್ದಾರೆ.

ಇದನ್ನೂ ಓದಿ: New JNU Rules: ಜೆಎನ್‌ಯುನಲ್ಲಿ ಪ್ರತಿಭಟನೆ ಮಾಡಿದರೆ 20 ಸಾವಿರ ರೂ., ದುರ್ವರ್ತನೆಗೆ 50 ಸಾವಿರ ರೂ. ದಂಡ

“ಎಬಿವಿಪಿ ನಾಯಕರು ದೆಹಲಿ ವಿವಿಯ ಕೇಂದ್ರೀಯ ಸಮಿತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂಬ ವಿಶ್ವಾಸವಿದೆ. ಹಾಗೆಯೇ, ಸ್ವಾಮಿ ವಿವೇಕಾನಂದರ ಆಶಯ, ವಿಚಾರಗಳ ಪಾಲನೆ, ಯುವಕರಲ್ಲಿ ರಾಷ್ಟ್ರೀಯವಾದದ ಜಾಗೃತಿ ಹೆಚ್ಚಿಸುವ ದಿಸೆಯಲ್ಲಿ ಕಾರ್ಯನಿರ್ವಹಿಸಲಿದೆ ಎಂಬ ದೃಢ ನಂಬಿಕೆ ಇದೆ” ಎಂದು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

Exit mobile version