ನವದೆಹಲಿ: ಬಿಜೆಪಿ ಮಾಜಿ ನಾಯಕಿ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ವಿರುದ್ಧ ನೀಡಿದ ಹೇಳಿಕೆ ಮುಸ್ಲಿಂ ರಾಷ್ಟ್ರಗಳ ಕಣ್ಣು ಕೆಂಪಾಗಿಸಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ, ಅರಬ್ ರಾಷ್ಟ್ರಗಳೆಲ್ಲ ಭಾರತವನ್ನೇ ಟೀಕಿಸುತ್ತಿದ್ದಾರೆ. ನೂಪುರ್ ಶರ್ಮಾರಿಗೆ ಅತ್ಯಾಚಾರ ಮತ್ತು ಜೀವ ಬೆದರಿಕೆ ಕರೆಗಳು ಸಾಲುಸಾಲು ಬರುತ್ತಿವೆ. ಪ್ರವಾದಿ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಭಾರತದ ವಿವಿಧ ನಗರಗಳ ಮೇಲೆ ಆತ್ಮಾಹುತಿ ದಾಳಿ ನಡೆಸುವುದಾಗಿ ಅಲ್ ಖೈದಾ ಉಗ್ರಸಂಘಟನೆ ಬೆದರಿಕೆ ಹಾಕಿದೆ. ಒಟ್ಟಾರೆ ಭಾರತದ ಒಟ್ಟಾರೆ ಸಾಮಾಜಿಕ-ಭದ್ರತೆ ವ್ಯವಸ್ಥೆಗೆ ನೂಪುರ್ ಶರ್ಮಾ ಹೇಳಿಕೆ ದೊಡ್ಡ ಸವಾಲೊಡ್ಡಿದೆ. ಹೀಗಾಗಿ ಭಾರತದಲ್ಲಿಯೇ ಯಾವೊಬ್ಬ ರಾಜಕಾರಣಿಯೂ ನೂಪುರ್ ಶರ್ಮಾರನ್ನು ಸಮರ್ಥಿಸಿಕೊಳ್ಳುತ್ತಿಲ್ಲ ಮತ್ತು ಆಕೆಗೆ ಬಹಿರಂಗವಾಗಿ ಬೆಂಬಲ ನೀಡುತ್ತಿಲ್ಲ.
ಇದೆಲ್ಲದರ ಮಧ್ಯೆ ಒಂದು ಅಚ್ಚರಿಯ ಬೆಳವಣಿಗೆಯೆಂಬಂತೆ ನೂಪುರ್ ಶರ್ಮಾ ಬೆಂಬಲಕ್ಕೆ ನೆದರ್‌ಲ್ಯಾಂಡ್‌ನ ಸಂಸದರೊಬ್ಬರು ನಿಂತಿದ್ದು. ನೆದರ್‌ಲ್ಯಾಂಡ್ ಎಂಪಿ, ಬಲಪಂಥೀಯ ನಾಯಕ ಗ್ರೀಟ್ ವೈಲ್ಡರ್ಸ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ನೂಪುರ್ ಶರ್ಮಾರಿಗೆ ಬೆಂಬಲ ಸೂಚಿಸಿದ್ದರು. I Support Nupur Sharma ಎಂದು ಅವರ ಫೋಟೋವನ್ನು ಪೋಸ್ಟ್ ಮಾಡಿದ್ದರು. ಅಲ್ ಖೈದಾ ಭಾರತದ ಮೇಲೆ ದಾಳಿ ಬೆದರಿಕೆ ಹಾಕಿದ ನಂತರವೂ ಟ್ವೀಟ್ ಮಾಡಿದ್ದ ವೈಲ್ಡರ್ಸ್, ʼಇಸ್ಲಾಮಿಕ್ ಉಗ್ರರ ಬೆದರಿಕೆಗಳಿಗೆಲ್ಲ ಯಾವ ಕಾರಣಕ್ಕೂ ಹೆದರಬೇಡಿ. ಅನಾಗರಿಕರಾದ ಅವರಿಗೆ ತಲೆ ಬಾಗುವ ಅಗತ್ಯವೂ ಇಲ್ಲ. ಈ ಹೊತ್ತಲ್ಲಿ ಭಾರತೀಯರೆಲ್ಲರೂ ನೂಪುರ್ ಶರ್ಮಾರನ್ನು ಬೆಂಬಲಿಸಬೇಕು. ಆಕೆಯೊಂದಿಗೆ ನಾವಿದ್ದೇವೆ ಎಂಬ ಸಂದೇಶವನ್ನು ಕೊಡಬೇಕು. ಅಲ್ ಖೈದಾ ಮತ್ತು ತಾಲಿಬಾನ್ ಉಗ್ರರು ತಮ್ಮ ಹಿಟ್‌ಲಿಸ್ಟ್‌ನಲ್ಲಿ ಒಂದು ವರ್ಷದ ಹಿಂದೆಯೇ ನನ್ನ ಹೆಸರನ್ನು ಬರೆದಿಟ್ಟಿದ್ದಾರೆ. ಆದರೆ ಅದಕ್ಕೆಲ್ಲ ಹೆದರುವುದಿಲ್ಲ. ಉಗ್ರರಿಗೆ ಯಾರೂ, ಎಂದಿಗೂ ಮಣಿಯಬೇಡಿʼ ಎಂದು ಕರೆ ಕೊಟ್ಟಿದ್ದಾರೆ.
ಇದನ್ನೂ ಓದಿ: ನೂಪುರ್ ಶರ್ಮಾಗೆ ಸಂಕಷ್ಟ; ರಕ್ಷಿಸಿ ಎಂದು ದೆಹಲಿ ಪೊಲೀಸ್ ಮೊರೆ ಹೋದ ಬಿಜೆಪಿ ಮಾಜಿ ವಕ್ತಾರೆ
ಡಚ್ ಎಂಪಿಗೂ ಬೆದರಿಕೆ !
ಡಚ್ ಸಂಸದ ವೈಲ್ಡರ್ಸ್ ನೂಪುರ್ ಶರ್ಮಾರಿಗೆ ಬೆಂಬಲ ಸೂಚಿಸುತ್ತಿದ್ದಂತೆ ಅವರಿಗೂ ಜೀವ ಬೆದರಿಕೆ ಕರೆಗಳು ಬರಲು ಪ್ರಾರಂಭವಾಗಿವೆಯಂತೆ. ಇದನ್ನೂ ಸ್ವತಃ ಅವರೇ ಟ್ವೀಟ್ ಮಾಡಿ ತಿಳಿಸಿದ್ದಾರೆ. ʼನಾನು ನೂಪುರ್ ಶರ್ಮಾರಿಗೆ ಸಪೋರ್ಟ್ ಮಾಡಿದ್ದಕ್ಕೆ ಮುಸ್ಲಿಮರು ನನ್ನನ್ನು ಕೊಲ್ಲುತ್ತಾರಂತೆ. ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದರ ಬಗ್ಗೆ ಸತ್ಯವನ್ನೇ ಮಾತನಾಡಿದ್ದಾರೆ. ಅದರಲ್ಲೇನೂ ತಪ್ಪಿಲ್ಲ. ನನಗೆ ಬೆದರಿಕೆ ಹಾಕಿದವರೆಲ್ಲ ನರಕಕ್ಕೆ ಹೋಗಲಿ ಎಂದು ನಾನು ಹಾರೈಸುತ್ತೇನೆ. ನಾವು ಸತ್ಯ-ಸ್ವಾತಂತ್ರ್ಯದ ಪರ ನಿಂತಿದ್ದೇವೆ, ಹೆದರುವ ಅಗತ್ಯವಿಲ್ಲʼ ಎಂದಿದ್ದಾರೆ.
ನೂಪುರ್ ಶರ್ಮಾ ಹೇಳಿಕೆ ಬೆನ್ನಲ್ಲೇ ಅವರನ್ನು ಬಿಜೆಪಿ ಅಮಾನತುಗೊಳಿಸಿದೆ. ಬಿಜೆಪಿ ಕೇಂದ್ರ ಸರ್ಕಾರ ಭಾರತವನ್ನು ಸಮರ್ಥಿಸಿಕೊಳ್ಳುತ್ತಿದೆಯೇ ಹೊರತು ನೂಪುರ್ ಶರ್ಮಾ ಹೇಳಿದ್ದು ಸರಿ ಎಂದು ಎಲ್ಲಿಯೂ ಹೇಳುತ್ತಿಲ್ಲ. ಒಬ್ಬರ ವೈಯಕ್ತಿಕ ಹೇಳಿಕೆಯನ್ನು, ದೃಷ್ಟಿಕೋನವನ್ನು ಇಡೀ ದೇಶಕ್ಕೆ ಅನ್ವಯಿಸಬೇಡಿ ಎಂದೂ ಹೇಳಿದೆ. ಇಷ್ಟೆಲ್ಲದರ ಮಧ್ಯೆ ನೂಪುರ್ ಶರ್ಮಾ ಪರ ಯಾರಾದರೂ ಗಟ್ಟಿಯಾಗಿ ಧ್ವನಿಯೆತ್ತಿದ್ದಾರೆ ಎಂದರೆ ಅದು ನೆದರ್‌ಲ್ಯಾಂಡ್‌ನ ಈ ಸಂಸದ ಎಂದೇ ಹೇಳಬಹುದು. ನಟಿ ಕಂಗನಾ ಕೂಡ ನೂಪುರ್ ಶರ್ಮಾ ಪರ ಇನ್‌ಸ್ಟಾ ಪೋಸ್ಟ್ ಹಾಕಿದ್ದರು. ʼನೂಪುರ್ ಶರ್ಮಾ ಅವರ ಅಭಿಪ್ರಾಯವನ್ನಷ್ಟೇ ಹೇಳಿಕೊಂಡಿದ್ದಾರೆ. ಅದಕ್ಕಾಗಿ ಇಷ್ಟರ ಮಟ್ಟಿಗೆ ಬೆದರಿಕೆ ಹಾಕುವುದು ಸರಿಯಲ್ಲʼ ಎಂದು ಹೇಳಿದ್ದರು.
ಇದನ್ನೂ ಓದಿ: ನೂಪುರ್ ಶರ್ಮಾ ಹೇಳಿಕೆಯನ್ನು ಬೆಂಬಲಿಸಿದರೇ ಸಿ.ಟಿ. ರವಿ?