ಭೋಪಾಲ: ಹಿಂದು ಧರ್ಮದ ಪ್ರಮುಖ ಸಂತರಲ್ಲಿ ಒಬ್ಬರಾಗಿದ್ದ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಡೆದ ಚಳವಳಿಗೆ ಮಹತ್ವದ ಕೊಡುಗೆ ನೀಡಿದ್ದ ಮಧ್ಯಪ್ರದೇಶದ ದ್ವಾರಕಾಪೀಠ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ (೯೯) (Swami Swaroopanand Saraswati) ಅವರು ಭಾನುವಾರ ದೈವಾಧೀನರಾಗಿದ್ದಾರೆ. ಮಧ್ಯಪ್ರದೇಶದ ನರಸಿಂಗಪುರದಲ್ಲಿರುವ ಶ್ರೀಧಾಮ ಜ್ಯೋತೇಶ್ವರ ಆಶ್ರಮದಲ್ಲಿ ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ.
ಆದಿಗುರು ಶಂಕರಾಚಾರ್ಯರರು ೧,೩೦೦ ವರ್ಷಗಳ ಹಿಂದೆ ಹಿಂದೂಗಳ ಸಂಘಟನೆ ಹಾಗೂ ಧರ್ಮೋದ್ಧಾರಕ್ಕಾಗಿ ದೇಶದಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿದ್ದರು. ಅದರಲ್ಲಿ ದ್ವಾರಕಾ ಪೀಠವೂ ಒಂದಾಗಿದ್ದು, ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಪೀಠದ ಶಂಕರಾಚಾರ್ಯರರಾಗಿದ್ದರು. ಸೋಮವಾರ ಸ್ವಾಮೀಜಿಯವರ ಅಂತ್ಯಸಂಸ್ಕಾರ ನೆರವೇರಲಿದೆ.
ಒಂಬತ್ತನೇ ವರ್ಷದಲ್ಲಿ ಮನೆ ತೊರೆದು, ವೇದಾಧ್ಯಯನ ಮಾಡಿ, ಹಿಂದೂ ಧರ್ಮದ ಉದ್ಧಾರಕ್ಕಾಗಿ ಶ್ರಮಿಸಿದ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು. ಶ್ರೀರಾಮನ ಕಟ್ಟಾ ಅನುಯಾಯಿಯಾಗಿದ್ದ ಸ್ವಾಮೀಜಿಯವರು, ಅಯೋಧ್ಯೆ ಹೋರಾಟದಲ್ಲೂ ಪಾಲ್ಗೊಂಡಿದ್ದರು. ದೇಶಾದ್ಯಂತ ಕೋಟ್ಯಂತರ ಅನುಯಾಯಿಗಳನ್ನೂ ಹೊಂದಿದ್ದರು.
ಮೋದಿ, ಯೋಗಿ ಸಂತಾಪ
ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ನಿಧನರಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ಹಲವರು ಕಂಬನಿ ಮಿಡಿದಿದ್ದಾರೆ. “ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ಅಗಲಿಕೆಯ ಸುದ್ದಿ ತಿಳಿದು ಮನಸ್ಸಿಗೆ ಘಾಸಿಯಾಗಿದೆ. ಅವರ ಅಪಾರ ಅನುಯಾಯಿಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ | Subhash Patriji | ಪಿರಮಿಡ್ ವ್ಯಾಲಿಯ ಗುರು ಸುಭಾಷ್ ಪತ್ರೀಜಿ ದೇಹ ತ್ಯಾಗ