ನವದೆಹಲಿ: ಕೇವಲ ಮೂರು ದಿನಗಳ ಅಂತರದಲ್ಲಿಯೇ ದೆಹಲಿಯಲ್ಲಿ ಎರಡನೇ ಬಾರಿ ಭೂಕಂಪ ಸಂಭವಿಸಿದೆ. ಸೋಮವಾರ (ನವೆಂಬರ್ 6) ಸಂಜೆ ತೀವ್ರ ಪ್ರಮಾಣದಲ್ಲಿ ದೆಹಲಿ ಹಾಗೂ ರಾಷ್ಟ್ರ ರಾಜಧಾನಿ ವ್ಯಾಪ್ತಿಯ (NCR) ಹಲವೆಡೆ ಭೂಕಂಪ (Delhi Earthquake) ಸಂಭವಿಸಿದೆ. ಭೂಮಿ ಕಂಪಿಸುತ್ತಲೇ ಮನೆಯ ಫ್ಯಾನ್ ಸೇರಿ ಹಲವು ವಸ್ತುಗಳು ಅಲುಗಾಡುತ್ತಲೇ ಸಾರ್ವಜನಿಕರು ಮನೆಯಿಂದ ಓಡಿಬಂದರು ಎಂದು ತಿಳಿದುಬಂದಿದೆ.
ಮನೆಗಳಲ್ಲಿರುವ ಫ್ಯಾನ್, ಟೇಬಲ್ ಮೇಲಿಟ್ಟ ಹಲವು ವಸ್ತುಗಳು ಅಲುಗಾಡಿವೆ. ಹಾಗಾಗಿ, ಜನ ಆತಂಕಗೊಂಡು ಮನೆಯಿಂದ ಓಡಿ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ನೇಪಾಳದಲ್ಲಿ ಸೋಮವಾರ ಮತ್ತೆ ಪ್ರಬಲ ಭೂಕಂಪ ಸಂಭವಿಸಿದ ಕಾರಣ ದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ ಎನ್ನಲಾಗಿದೆ. ಹಾಗಾಗಿ, ದೆಹಲಿ, ಘಾಜಿಯಾಬಾದ್, ಗುರುಗ್ರಾಮ, ಸೋನಿಪತ್ ಸೇರಿ ಹಲವೆಡೆ ಭೂಮಿ ಕಂಪಿಸಿದೆ ಎಂಬುದಾಗಿ ಮೂಲಗಳು ತಿಳಿಸಿವೆ.
Strong earthquake tremors felt in Delhi pic.twitter.com/wZmcnIfH1u
— ANI (@ANI) November 6, 2023
ನೇಪಾಳದಲ್ಲಿ ರಿಕ್ಟರ್ ಮಾಪನದಲ್ಲಿ 5.6 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಸೋಮವಾರ ಸಂಜೆ 4.16ರ ಸುಮಾರಿಗೆ ಭೂಮಿ ಕಂಪಿಸಿದ್ದು, ಸದ್ಯದ ವರದಿಗಳ ಪ್ರಕಾರ ಯಾವುದೇ ಸಾವು-ನೋವು ಸಂಭವಿಸಿಲ್ಲ ಎನ್ನಲಾಗಿದೆ. ನವೆಂಬರ್ 3ರಂದು ರಾತ್ರಿ 11.32ರ ಸುಮಾರಿಗೆ ನೇಪಾಳದಲ್ಲಿ ಭಾರಿ ಭೂಕಂಪ ಸಂಭವಿಸಿತ್ತು. ಇದರಿಂದಾಗಿ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತು.
ಇದನ್ನೂ ಓದಿ: Afghan Earthquake: ಅಫಘಾನಿಸ್ತಾನದಲ್ಲಿ ಸರಣಿ ಭೂಕಂಪ, ಮೃತರ ಸಂಖ್ಯೆ 2000ಕ್ಕೆ ಏರಿಕೆ
ನೇಪಾಳದಲ್ಲಿ 157 ಜನ ಸಾವು
ನೇಪಾಳದಲ್ಲಿ ಮೂರು ದಿನಗಳ ಹಿಂದೆ ಸಂಭವಿಸಿದ ಭೂಕಂಪದಲ್ಲಿ 157 ಜನ ಮೃತಪಟ್ಟಿದ್ದು, 250ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಕಟ್ಟಡಗಳು ಧರೆಗುರುಳಿದ್ದು, ಜನರ ರಕ್ಷಣೆಗೆ ಹರಸಾಹಸ ಮಾಡಬೇಕಾಗಿತ್ತು. ಮಹಿಳೆಯರು, ಮಕ್ಕಳು, ಹಿರಿಯರು ಭೂಕಂಪಕ್ಕೆ ಬಲಿಯಾಗಿದ್ದರು. ಅಷ್ಟಕ್ಕೂ, ನೇಪಾಳದಲ್ಲಿ ಕಳೆದ ಮೂರು ದಿನಗಳಲ್ಲಿ ಮೂರ್ನಾಲ್ಕು ಬಾರಿ ಭೂಮಿ ಕಂಪಿಸಿದ ಕಾರಣ ಜನರಲ್ಲಿ ಭಯ ಮನೆಮಾಡಿದೆ.
ಕಳೆದ ತಿಂಗಳು ಅಫಘಾನಿಸ್ತಾನದ ಹೆರಾತ್‌ನಲ್ಲಿ ಸಂಭವಿಸಿದ ಸರಣಿ ಭೂಕಂಪದಲ್ಲಿ 2 ಸಾವಿರಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಹೆರಾತ್ ನಗರ ಮಾತ್ರವಲ್ಲದೇ, ಪಶ್ಚಿಮ ಅಫಘಾನಿಸ್ತಾನದ ಗ್ರಾಮೀಣ ಪ್ರದೇಶದಲ್ಲೂ ಭೂಕಂಪದ ತೀವ್ರತೆ ಹೆಚ್ಚಾಗಿದ್ದು, ಸಾಕಷ್ಟು ಸಾವು ನೋವು ಸಂಭವಿಸಿತ್ತು. ತಾಲಿಬಾನ್ (Taliban Administration) ಆಡಳಿತದ ಹಿನ್ನೆಲೆಯಲ್ಲಿ ಈಗಾಗಲೇ ಸಾಕಷ್ಟು ಮಾನವೀಯ ಬಿಕ್ಕಟ್ಟು ಎದುರಿಸುತ್ತಿರುವ ಅಫಘಾನಿಸ್ತಾನಕ್ಕೆ ಈ ಭೂಕಂಪವು ಭಾರೀ ಹೊಡೆತ ನೀಡಿತ್ತು.