ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ (Hemant Soren) ಅವರ ಗಾದಿಗೆ ಕುತ್ತು ಬಂದಿದೆ. ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಸೊರೆನ್ ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸಬೇಕು ಎಂದು ಚುನಾವಣೆ ಆಯೋಗವು ರಾಜ್ಯಪಾಲರಿಗೆ ಶಿಫಾರಸು ಮಾಡಿದೆ. ಹಾಗಾಗಿ, ಶೀಘ್ರದಲ್ಲಿಯೇ ಈ ಕುರಿತು ರಾಜ್ಯಪಾಲರಾದ ರಮೇಶ್ ಬೈಸ್ ಅವರು ತೀರ್ಮಾನ ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ತಮ್ಮ ಗಣಿಯ ಗುತ್ತಿಗೆ ಅವಧಿಯನ್ನು ತಾವೇ ವಿಸ್ತರಿಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ನೀಡಿದ ದೂರಿನ ಅನ್ವಯ ಚುನಾವಣೆ ಆಯೋಗವು ತನಿಖೆ ನಡೆಸಿದೆ. ತನಿಖೆ ಬಳಿಕ ಸೊರೆನ್ ಅವರು ನಿಯಮ ಉಲ್ಲಂಘಿಸಿರುವುದು ಕಂಡುಬಂದ ಕಾರಣ ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸಬೇಕು ಎಂದು ಮುಚ್ಚಿದ ಲಕೋಟೆಯಲ್ಲಿ ಆಯೋಗವು ರಾಜಭವನಕ್ಕೆ ಶಿಫಾರಸು ಕಳುಹಿಸಿದೆ.
ರಾಜ್ಯಪಾಲ ರಮೇಶ್ ಬೈಸ್ ಅವರು ದಿಲ್ಲಿಯಲ್ಲಿದ್ದು, ಮಧ್ಯಾಹ್ನ ೨ ಗಂಟೆ ಸುಮಾರಿಗೆ ರಾಂಚಿಗೆ ಆಗಮಿಸಲಿದ್ದಾರೆ. ಅವರು ಬಂದ ಬಳಿಕ ಈ ಕುರಿತು ತೀರ್ಮಾನ ತೆಗೆದುಕೊಳ್ಳುತ್ತಾರೆ. ಹಾಗೊಂದು ವೇಳೆ, ರಾಜ್ಯಪಾಲರು ಅನರ್ಹತೆ ಘೋಷಿಸಿದರೆ, ಹೇಮಂತ್ ಸೊರೆನ್ ಅವರ ಮುಖ್ಯಮಂತ್ರಿ ಸ್ಥಾನಕ್ಕೇ ಕುತ್ತು ಬರಲಿದೆ.
ಇದನ್ನೂ ಓದಿ | ಜಾರ್ಖಂಡ್ ಮೈತ್ರಿ ಸರಕಾರ ಪತನಕ್ಕೆ ಸ್ಕೆಚ್ ಹಾಕಿದ್ದು ನಿಜವೇ? ಏನಿದು ಆಪರೇಷನ್ ಅಸ್ಸಾಂ?