Site icon Vistara News

EC Proposal | 20 ಸಾವಿರ ಅಲ್ಲ, 2 ಸಾವಿರ ರೂ. ದೇಣಿಗೆ ಸ್ವೀಕರಿಸಿದರೂ ಮಾಹಿತಿ ನೀಡಬೇಕು ಪಕ್ಷಗಳು!

Election Commission

ನವ ದೆಹಲಿ: ರಾಜಕೀಯ ಪಕ್ಷಗಳಿಗೆ ಕಪ್ಪು ಹಣ ಸಂದಾಯವಾಗುವುದನ್ನು ತಪ್ಪಿಸುವುದಕ್ಕಾಗಿ ಪ್ರಮುಖ ಸುಧಾರಣೆಯನ್ನು ಕೇಂದ್ರ ಚುನಾವಣಾ ಆಯೋಗ(EC)ವು ಪ್ರಸ್ತಾಪಿಸಿದೆ. ಅನಾಮಧೇಯ ದೇಣಿಗೆಯ ಮಿತಿಯನ್ನು 20 ಸಾವಿರ ರೂ.ನಿಂದ 2 ಸಾವಿರ ರೂ.ಗೆ ಮತ್ತು ನಗದು ದೇಣಿಗೆ ಮಿತಿಯನ್ನು ಶೇ.20 ಅಥವಾ 20 ಕೋಟಿ ರೂ.ಗೆ ಮಿತಿಗೊಳಿಸುವ ಹೊಸ ಪ್ರಸ್ತಾಪವನ್ನು ಚುನಾವಣಾ ಆಯೋಗವು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಕೇಂದ್ರ ಕಾನೂನು ಸಚಿವ ಕಿರೆನ್ ರಿಜಿಜು ಅವರಿಗೆ ಪತ್ರ ಬರೆದಿದ್ದಾರೆ. ಪ್ರಜಾ ಪ್ರತಿನಿಧಿ ಕಾಯಿದೆಗೆ ಈ ಸಂಬಂಧ ತಿದ್ದುಪಡಿ ತರುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜಕೀಯ ಪಕ್ಷಗಳು ಸ್ವೀಕರಿಸುವ ದೇಣಿಗೆಯ ಪ್ರಕ್ರಿಯಯಲ್ಲಿ ಪಾರರ್ಶಕತೆ ಮತ್ತು ಸುಧಾರಣೆ ತರುವುದರ ನಿಟ್ಟಿನಲ್ಲಿ ಚುನಾವಣಾ ಆಯೋಗವು ಈ ಪ್ರಸ್ತಾಪಗಳನ್ನು ಸಲ್ಲಿಸಲಿದೆ. ಜತೆಗೆ, ಚುನಾವಣೆ ವೇಳೆಯಲ್ಲಿ ಅಭ್ಯರ್ಥಿಗಳು ಮಾಡುವ ವೆಚ್ಚದ ಬಗ್ಗೆ ನಿಗಾವಹಿಸಲು ಇದರಿಂದ ನೆರವಾಗಲಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗಷ್ಟೇ ಚುನಾವಣಾ ಆಯೋಗವು, ನೋಂದಾಯಿತ ಮಾನ್ಯತೆ ಪಡೆಯದ 284 ರಾಜಕೀಯ ಪಕ್ಷಗಳನ್ನು ಪಟ್ಟಿ ಮಾಡಿದ ಬೆನ್ನಲ್ಲೇ ಈ ಹೊಸ ಸುಧಾರಣೆಯ ಪ್ರಸ್ತಾಪವನ್ನು ಸಿದ್ದಪಡಿಸಿದೆ. ಆಯೋಗವು ಇನ್ನೂ ಇಂಥ 253 ರಾಜಕೀಯ ಪಕ್ಷಗಳನ್ನು ಪಟ್ಟಿ ಮಾಡಿದೆ ಎಂದು ತಿಳಿದು ಬಂದಿದೆ.

ಕೇಂದ್ರ ಚುನಾವಣಾ ಆಯೋಗವು ತನ್ನ ಬಳಿ ಇರುವ ಮಾಹಿತಿಯನ್ನು ಕೇಂದ್ರ ತನಿಖಾ ಸಂಸ್ಥೆಗಳೊಂದಿಗೆ ಹಂಚಿಕೊಂಡಿದೆ. ಈ ಹಿನ್ನೆಲೆಯಲ್ಲೇ ಆದಾಯ ತೆರಿಗೆ ಇಲಾಖೆ ದೇಶಾದ್ಯಂತ ದಾಳಿ ನಡೆಸಿ, ತೆರಿಗೆ ವಂಚಿಸುತ್ತಿರುವ ಕಂಪನಿಗಳ ಮೇಲೆ ದಾಳಿ ನಡೆಸಿದೆ. ಇವೆಲ್ಲವೂ ರಾಜಕೀಯ ಪಕ್ಷಗಳೊಂದಿಗೆ ನಂಟು ಹೊಂದಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಈಗಿರುವ ನಿಯಮಗಳ ಪ್ರಕಾರ, 20 ಸಾವಿರ ರೂ.ಗಿಂತ ಹೆಚ್ಚು ಮೊತ್ತದ ದೇಣಿಗೆಯನ್ನು ಪಡೆದುಕೊಂಡರೆ, ಆ ಬಗ್ಗೆ ಮಾಹಿತಿಯನ್ನು ತಮ್ಮ ದೇಣಿಗೆ ವಹಿಯಲ್ಲಿ ದಾಖಲಿಸಬೇಕಾಗುತ್ತದೆ. ಒಂದೊಮ್ಮೆ ಕೇಂದ್ರ ಸರ್ಕಾರವು ಚುನಾವಣಾ ಆಯೋಗದ ಹೊಸ ಪ್ರಸ್ತಾಪವನ್ನು ಒಪ್ಪಿದರೆ, ಈ ಮಿತಿ 20 ಸಾವಿರದಿಂದ 2 ಸಾವಿರ ರೂ.ವರೆಗೆ ಇಳಿಕೆಯಾಗಲಿದೆ. ಆಗ ರಾಜಕೀಯ ಪಕ್ಷಗಳು 2 ಸಾವಿರ ರೂ. ಮೇಲ್ಪಟ್ಟ ದೇಣಿಗೆ ನೀಡಿದವರ ಮಾಹಿತಿಯನ್ನು ಬಹಿರಂಗಗೊಳಿಸಬೇಕಾಗುತ್ತದೆ.

ಇದನ್ನೂ ಓದಿ | ಮತದಾರರಿಗೆ ಆಮಿಷಗಳನ್ನು ನಿಲ್ಲಿಸದಿದ್ದರೆ ಚುನಾವಣಾ ಆಯೋಗಕ್ಕೆ ದೇವರೇ ಗತಿ : ಸುಪ್ರೀಂ

Exit mobile version