ರಾಂಚಿ: ಜಾರ್ಖಂಡ್ ಗ್ರಾಮೀಣ ಅಭಿವೃದ್ಧಿ ಸಚಿವ, ಕಾಂಗ್ರೆಸ್ ನಾಯಕ ಆಲಂಗೀರ್ ಆಲಂ (Alamgir Alam) ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ (Sanjiv Lal) ಮನೆಗೆಲಸದವನ ಮನೆಯಲ್ಲಿ ಸುಮಾರು 35 ಕೋಟಿ ರೂ. ಪತ್ತೆಯಾದ ಬೆನ್ನಲ್ಲೇ ಇ.ಡಿ (ED) ಅಧಿಕಾರಿಗಳು ಆಲಂಗೀರ್ ಆಲಂ ಅವರನ್ನು ಬಂಧಿಸಿದ್ದಾರೆ. ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಸುಮಾರು 10 ಗಂಟೆ ವಿಚಾರಣೆ ನಡೆಸಿದ ಇ.ಡಿ ಅಧಿಕಾರಿಗಳು ಬಳಿಕ ಅವರನ್ನು ಬಂಧಿಸಿದರು.
ರಾಜ್ಯದ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕೋಟ್ಯಂತರ ರೂ. ಅವ್ಯವಹಾರ, ಅಕ್ರಮವಾಗಿ ಹಣ ವರ್ಗಾವಣೆ ಸೇರಿ ಹಲವು ಆರೋಪಗಳು ಕೇಳಿಬಂದಿದ್ದು, ಇ.ಡಿ ತನಿಖೆ ನಡೆಸುತ್ತಿದೆ. ಆಲಂಗೀರ್ ಆಲಂ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಹಾಗೂ ಆತನ ಮನೆಯಲ್ಲಿ ಕೆಲಸ ಮಾಡುವ ಜಹಾಂಗೀರ್ ಆಲಂ ಅವರನ್ನು ಈಗಾಗಲೇ ಇ.ಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಮನೆಗೆಲಸದವನಾದ ಜಹಾಂಗೀರ್ ಆಲಂ ಮನೆಯಲ್ಲಿ ಇ.ಡಿ ಅಧಿಕಾರಿಗಳು ದಾಳಿ ನಡೆಸಿದಾಗ ಸುಮಾರು 35.23 ಕೋಟಿ ರೂ. ಸಿಕ್ಕಿದೆ.
ED arrests Jharkhand Minister and Congress leader Alamgir Alam in connection with a huge cash recovery from the household help of his PS Sanjeev Lal. pic.twitter.com/0GxcZkrmc1
— ANI (@ANI) May 15, 2024
ಅಕ್ರಮ ಹಣ ವರ್ಗಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಂಚಿಯ ಹಲವೆಡೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಜಹಾಂಗೀರ್ ಆಲಂ ಮನೆಗೆ ದಾಳಿ ಮಾಡಿದಾಗಂತೂ ನೋಟುಗಳ ರಾಶಿಯೇ ಕಂಡುಬಂದಿತ್ತು. 12ಕ್ಕೂ ಅಧಿಕ ಗಂಟೆಗಳವರೆಗೆ ಅಧಿಕಾರಿಗಳು ನೋಟುಗಳ ರಾಶಿಗಳನ್ನು ಮಷೀನ್ ಮೂಲಕ ಎಣಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಆಲಂಗೀರ್ ಆಲಂ ಅವರನ್ನು ಕರೆಯಲಾಗಿತ್ತು. ಸತತ ವಿಚಾರಣೆ ನಡೆಸಿದ ಬಳಿಕ ಇ.ಡಿ ಅಧಿಕಾರಿಗಳು ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅಕ್ರಮವಾಗಿ ಹಣ ವರ್ಗಾವಣೆ ಪ್ರಕರಣದಲ್ಲಿಯೇ ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್ ಅವರು ಜೈಲುಪಾಲಾಗಿದ್ದಾರೆ.
2023ರಲ್ಲಿ ಕೆಲವು ಯೋಜನೆಗಳ ಅನುಷ್ಠಾನಕ್ಕಾಗಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪದಲ್ಲಿ ಇ.ಡಿಯು ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಎಂಜಿನಿಯರ್ ವೀರೇಂದ್ರ ರಾಮ್ ಎಂಬವರನ್ನು ಬಂಧಿಸಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್ ಆಲಂ ಅವರ ಆಪ್ತ ಕಾರ್ಯದರ್ಶಿಯ ಮನೆಯ ಮೇಲೆಯೂ ದಾಳಿ ಮಾಡಿದೆ. ಸದ್ಯ ನೋಟಿನ ಕಂತೆ ನೋಡಿ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ. ದಾಳಿ ವೇಳೆ ನಕಲಿ ಪ್ಯಾನ್ ಕಾರ್ಡ್‌ಗಳ ಮೂಲಕ ನಕಲಿ ಕಂಪನಿಗಳನ್ನು ರಚಿಸುವುದರಿಂದ ಹಿಡಿದು ಚರ ಮತ್ತು ಸ್ಥಿರಾಸ್ತಿಗಳ ಖರೀದಿಗಾಗಿ ಕೋಟಿ ರೂ.ಗಳ ನಗದು ವಿನಿಮಯ ನಡೆಸಿದ ಮಾಹಿತಿಯೂ ಸಿಕ್ಕಿದೆ ಎಂದು ಇಡಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Bank Loan Fraud : 34,000 ಕೋಟಿ ರೂ. ಬ್ಯಾಂಕ್ ವಂಚನೆ, ಡಿಎಚ್ಎಫ್ಎಲ್ ಮಾಜಿ ನಿರ್ದೇಶಕನ ಬಂಧನ