ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ಇಂದು (ಜೂ.23) ಇ.ಡಿ. ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಅವರು ಈಗಷ್ಟೇ ಕೊವಿಡ್ 19ನಿಂದ ಚೇತರಿಸಿಕೊಳ್ಳುತ್ತಿರುವ ಕಾರಣ ತಮ್ಮ ವಿಚಾರಣೆ ಮುಂದೂಡುವಂತೆ ಮನವಿ ಮಾಡಿದ್ದರು. ಅದನ್ನು ಇ.ಡಿ. ಅಧಿಕಾರಿಗಳು ಪುರಸ್ಕರಿಸಿದ್ದಾರೆ. ಅಷ್ಟೇ ಅಲ್ಲ, ಇಂಥದ್ದೇ ದಿನಾಂಕದಂದು ಬನ್ನಿ ಎಂದು ಕೂಡ ಹೇಳಿಲ್ಲ. ʼಜುಲೈ ಕೊನೆಯಲ್ಲಿ ಬಂದು ಹೇಳಿಕೆ ದಾಖಲಿಸಿದರೆ ಸಾಕುʼ ಎಂದು ತಿಳಿಸಿದ್ದಾರೆ. ಇನ್ನೊಂದೆಡೆ ರಾಹುಲ್ ಗಾಂಧಿಗೂ ಕಳೆದ ಎರಡು ದಿನಗಳಿಂದ ಇ.ಡಿ. ಬ್ರೇಕ್ ನೀಡಿದೆ. ಮುಂದಿನ ವಿಚಾರಣೆ, ಸಮನ್ಸ್ ನೀಡಿರುವ ಬಗ್ಗೆ ಮಾಹಿತಿಯಿಲ್ಲ.
ರಾಹುಲ್ ಗಾಂಧಿ ಜೂ.13ರಿಂದ 15ರವರೆಗೆ ನಿರಂತರವಾಗಿ ಇಡಿ ವಿಚಾರಣೆಗೆ ಒಳಪಟ್ಟಿದ್ದಾರೆ. ನಂತರ ಮತ್ತೆ ಜೂ.20 ಹಾಗೂ 21ರಂದು ಅವರನ್ನು ಗ್ರಿಲ್ ಮಾಡಲಾಗಿದೆ. ಜೂ.22ರಂದು ಎಐಸಿಸಿ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ, ʼಇ.ಡಿ.ವಿಷಯ ಬಿಟ್ಟೇಬಿಡಿ. ಅದೇನೂ ಮಹಾನ್ ವಿಚಾರವೇ ಅಲ್ಲ. ನಾವು ಇಂಥದ್ದಕ್ಕೆಲ್ಲ ಬೆದರುವುದಿಲ್ಲ ಎಂದು ಇ.ಡಿ. ಗೂ ಗೊತ್ತಾಗಿದೆ. ಇನ್ನೇನಿದ್ದರೂ ಅಗ್ನಿಪಥ್ ವಿರೋಧಿ ಹೋರಾಟದೆಡೆಗೆ ಗಮನಕೊಡೋಣ. ಇದು ಕೇಂದ್ರ ಸರ್ಕಾರದ ಅವೈಜ್ಞಾನಿಕ ಯೋಜನೆಯಾಗಿದ್ದು, ಹಿಂಪಡೆಯುವವರೆಗೂ ಪ್ರತಿಭಟನೆ ನಡೆಸೋಣʼ ಎಂದು ಕರೆಕೊಟ್ಟಿದ್ದರು.
ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ಸೋನಿಯಾ ಗಾಂಧಿ ವಿಚಾರಣೆಗೆ ಮೊದಲು ಜೂ.8 ದಿನಾಂಕ ನಿಗದಿಯಾಗಿತ್ತು. ಆದರೆ ಜೂ. 2ರಂದು ಅವರಲ್ಲಿ ಕೊರೊನಾ ದೃಢಪಟ್ಟಿತ್ತು. ಹೀಗಾಗಿ ಅದನ್ನು ಮುಂದೂಡಲಾಗಿತ್ತು. ಬಳಿಕ ಮತ್ತೆ ಜೂ.23ಕ್ಕೆ ದಿನಾಂಕ ನಿಗದಿಯಾಯಿತು. ಆದರೆ ಸೋನಿಯಾ ಗಾಂಧಿ ಶ್ವಾಸಕೋಶದ ಸೋಂಕಿನಿಂದ ಜೂ.12ಕ್ಕೆ ಆಸ್ಪತ್ರೆಗೆ ದಾಖಲಾಗಿ ಮೂರು ದಿನಗಳ ಹಿಂದಷ್ಟೇ ಡಿಸ್‌ಚಾರ್ಜ್ ಆಗಿದ್ದಾರೆ. ಕಟ್ಟುನಿಟ್ಟಿನ ವಿಶ್ರಾಂತಿ ಅಗತ್ಯವೆಂದು ವೈದ್ಯರೂ ಹೇಳಿದ್ದಾರೆ. ಹೀಗಾಗಿ ತಮ್ಮ ವಿಚಾರಣೆ ಮುಂದೂಡಬೇಕೆಂದು ಅವರು ಕೇಳಿದ್ದರು.
ಇದನ್ನೂ ಓದಿ: National Herald: ರಾಹುಲ್ ಗಾಂಧಿಗೆ ಇ.ಡಿ ಫುಲ್ ಗ್ರಿಲ್; ದೇಶಾದ್ಯಂತ ಕೈ ಪ್ರತಿಭಟನೆಯ ಸವಾಲ್