ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ (Delhi Liquor Scam) ಆಮ್ ಆದ್ಮಿ ಪಕ್ಷದ ನಾಯಕರೂ ಆದ ರಾಜ್ಯಸಭೆ ಸದಸ್ಯ ಸಂಜಯ್ ಸಿಂಗ್ (Sanjay Singh) ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿರುವ ಸಂಜಯ್ ಸಿಂಗ್ ನಿವಾಸದಲ್ಲಿ ಇನ್ನೂ ಇ.ಡಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ದಾಳಿಯ ವಿಡಿಯೊ ಲಭ್ಯವಾಗಿದೆ.
ಅಬಕಾರಿ ನೀತಿ ಜಾರಿ ಹಗರಣಕ್ಕೆ ಸಂಬಂಧಿಸಿದಂತೆ ಇದಕ್ಕೂ ಮೊದಲು ಕೂಡ ಸಂಜಯ್ ಸಿಂಗ್ ಅವರ ಆಪ್ತ ನಿವಾಸಗಳ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ಮಾಡಿದ್ದರು. ಈಗ ಸಂಜಯ್ ಸಿಂಗ್ ಅವರ ನಿವಾಸಕ್ಕೇ ಅಧಿಕಾರಿಗಳು ಲಗ್ಗೆ ಇಟ್ಟಿದ್ದಾರೆ. ದಾಳಿ ಕುರಿತು ಸಂಜಯ್ ಸಿಂಗ್ ಅವರ ತಂದೆ ಪ್ರತಿಕ್ರಿಯಿಸಿದ್ದು, “ಅಧಿಕಾರಿಗಳು ಅವರ ಕೆಲಸ ಮಾಡುತ್ತಿದ್ದಾರೆ. ನಾವು ಅವರಿಗೆ ಸಹಕಾರ ನೀಡುತ್ತಿದ್ದೇವೆ. ನನ್ನ ಮಗ ಪ್ರಕರಣದಲ್ಲಿ ನಿರ್ದೋಷಿಯಾಗಿ ಹೊರಬರಲಿದ್ದಾನೆ” ಎಂದು ಹೇಳಿದ್ದಾರೆ.
#WATCH | Visuals from outside AAP Rajya Sabha MP Sanjay Singh's residence
— ANI (@ANI) October 4, 2023
ED raids underway at the residence of AAP Rajya Sabha MP Sanjay Singh pic.twitter.com/k6FRDjY12S
ಇದನ್ನೂ ಓದಿ: Delhi Liquor Scam: ದೆಹಲಿ ಅಬಕಾರಿ ನೀತಿ ಅಕ್ರಮ; ಹೈದರಾಬಾದ್ ಉದ್ಯಮಿ ಅರುಣ್ ರಾಮಚಂದ್ರ ಪಿಳ್ಳೈ ಬಂಧನ
ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಸಂಜಯ್ ಸಿಂಗ್ ಹೆಸರು ಉಲ್ಲೇಖವಿದೆ. ಇನ್ನು ಇ.ಡಿ ದಾಳಿ ಕುರಿತು ಆಪ್ ಆಕ್ರೋಶ ವ್ಯಕ್ತಪಡಿಸಿದೆ. “ಸಂಜಯ್ ಸಿಂಗ್ ಅವರು ಅದಾನಿ ಪ್ರಕರಣದ ಕುರಿತು ಗಟ್ಟಿಯಾಗಿ ಧ್ವನಿ ಎತ್ತಿದ್ದಾರೆ. ಹಾಗಾಗಿ, ಅವರ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಇದಕ್ಕೂ ಮೊದಲು ಕೂಡ ಇ.ಡಿ ಅಧಿಕಾರಿಗಳಿಗೆ ಏನೂ ಸಿಕ್ಕಿಲ್ಲ, ಮುಂದೆಯೂ ಸಿಗುವುದಿಲ್ಲ” ಎಂದಿದ್ದಾರೆ.
ಏನಿದು ಪ್ರಕರಣ?
ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರವು ಅಬಕಾರಿ ನೀತಿ 2021-22 ಜಾರಿಗೆ ತಂದಿತ್ತು. ಖಾಸಗಿ ಸಂಸ್ಥೆಗಳು ಚಿಲ್ಲರೆ ಮದ್ಯ ಮಾರಾಟ ವಲಯಕ್ಕೆ ಪ್ರವೇಶಿಸಲು ಅನುಕೂಲ ಮಾಡಿಕೊಡುವ ದಿಸೆಯಲ್ಲಿ ನೀತಿ ಜಾರಿಗೆ ತರಲಾಗಿದ್ದು, ಇದಕ್ಕಾಗಿ ಭಾರಿ ಪ್ರಮಾಣದ ಹಣ ಪಡೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ನೀತಿಯು ವಿವಾದಕ್ಕೆ ಕಾರಣವಾಗುತ್ತಲೇ ಅರವಿಂದ್ ಕೇಜ್ರಿವಾಲ್ ಸರ್ಕಾರವು ವಾಪಸ್ ಪಡೆದಿದೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಆಗ ಉಪ ಮುಖ್ಯಮಂತ್ರಿಯಾಗಿದ್ದ ಮನೀಶ್ ಸಿಸೋಡಿಯಾ ಸೇರಿ ಹಲವರನ್ನು ಬಂಧಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ. ಕವಿತಾ ಅವರನ್ನೂ ಇ.ಡಿ ವಿಚಾರಣೆ ನಡೆಸಿದೆ.