ನವದೆಹಲಿ: ದಿಲ್ಲಿ ಅಬಕಾರಿ ನೀತಿ ಹಗರಣಕ್ಕೆ (Delhi excise policy case) ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತೆಲಂಗಾಣದ ಇಬ್ಬರು ಉದ್ಯಮಿಗಳನ್ನು ಜಾರಿ ನಿರ್ದೇಶನಾಲಯವು(ಇ.ಡಿ) ಬಂಧಿಸಿದೆ. ಈ ಬಂಧಿತರ ಪೈಕಿ ಒಬ್ಬರು ಫಾರ್ಮಾ ಕಂಪನಿಯ ಸಹ ಮಾಲೀಕರು ಇದ್ದಾರೆ ಎನ್ನಲಾಗಿದೆ. ಬೆನಾಯ್ ಬಾಬು ಮತ್ತು ಶರತ್ ರೆಡ್ಡಿ ಅವರು ಬಂಧಿತರು.
ಬಂಧಿತ ಶರತ್ ರೆಡ್ಡಿ ಅವರು ಅರಬಿಂದೋ ಫಾರ್ಮಾ ಮಾಲೀಕರಾಗಿದ್ದರೆ, ಮತ್ತೊಬ್ಬರು ಪೆರ್ನಾಡ್ ರಿಚರ್ಡ್‌ನ ಬೆನಾಯ್ ಬಾಬು. ದಿಲ್ಲಿಯ ಅಬಕಾರಿ ನೀತಿಯ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ದೇಶಾದ್ಯಂತ ತೀವ್ರ ತನಿಖೆಯನ್ನು ಕೈಗೊಂಡಿದೆ. ಅದರ ಭಾಗವಾಗಿಯೇ ಹೈದ್ರಾಬಾದ್‌ನಲ್ಲಿ ಈ ಇಬ್ಬರನ್ನು ಬಂಧಿಸಲಾಗಿದೆ ಎಂದು ತನಿಖಾ ಸಂಸ್ಥೆಗಳು ತಿಳಿಸಿವೆ. ಹಣ ಅಕ್ರಮ ವರ್ಗಾವಣೆ ತಡೆ(ಪಿಎಂಎಲ್ಎ) ಕಾಯ್ದೆಯಡಿ ಈ ಇಬ್ಬರನ್ನು ಬಂಧಿಸಲಾಗಿದೆ.
ದಿಲ್ಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇ.ಡಿ. ದಿಲ್ಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರನ್ನು ವಿಚಾರಣೆಗೊಳಪಡಿಸಿದೆ. ಅಲ್ಲದೇ, ಅವರ ಆಪ್ತ ಕಾರ್ಯದರ್ಶಿಯನ್ನೂ ಬಂಧಿಸಿದೆ. ಇದಕ್ಕೂ ಮೊದಲು ಇಂಡೋಸ್ಪಿರಿಟ್ ಮದ್ಯ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಮಹಾಂದ್ರು ಅವರನ್ನು ಇ.ಡಿ ಬಂಧಿಸಿತ್ತು. ಅಬಕಾರಿ ನೀತಿ ಹಗರಣವು ದಿಲ್ಲಿಯಲ್ಲಿ ಆಪ್ ಮತ್ತು ಬಿಜೆಪಿ ನಡುವಿನ ಆರೋಪ ಮತ್ತು ಪ್ರತ್ಯಾರೋಪಕ್ಕೆ ಕಾರಣವಾಗಿದೆ.
ಇದನ್ನೂ ಓದಿ | Delhi Excise Policy Case | ದೆಹಲಿ ಡಿಸಿಎಂ ಮನೀಷ್ ಸಿಸೋಡಿಯಾ ಆಪ್ತ ಕಾರ್ಯದರ್ಶಿಯ ಬಂಧನ