Site icon Vistara News

ED Raids: ಸಂದೇಶಖಾಲಿಯ ವಿವಿಧೆಡೆ ಇ.ಡಿ ದಾಳಿ; ಶೇಖ್ ಶಹಜಹಾನ್‌ನ ಸಹಚರರ ನಿವಾಸಗಳಲ್ಲಿ ಶೋಧ

Sheikh Shahjahan

Sheikh Shahjahan

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸಂದೇಶಖಾಲಿ ಪ್ರಕರಣದ (Sandeshkhali Violence) ಆರೋಪಿ, ಶೇಖ್ ಶಹಜಹಾನ್‌ (Sheikh Shahjahan)ನನ್ನು ಈಗಾಗಲೇ ಬಂಧಿಸಲಾಗಿದೆ. ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯ (Enforcement Directorate)ದ ಅಧಿಕಾರಿಗಳು ಶೇಖ್ ಶಹಜಹಾನ್‌ (Sheikh Shahjahan) ಸಹಚರರ ನಿವಾಸ ಸೇರಿದಂತೆ ಪಶ್ಚಿಮ ಬಂಗಾಳದ ಸಂದೇಶಖಾಲಿಯಲ್ಲಿನ ಹಲವು ಕಡೆಗಳಲ್ಲಿ ದಾಳಿ ನಡೆಸಿದರು (ED Raids).

ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸಂದೇಶಖಾಲಿಯಲ್ಲಿರುವ ಶೇಖ್ ಶಹಜಹಾನ್‌ಗೆ ಸೇರಿದ ಇಟ್ಟಿಗೆ ಗೂಡಿನ ಮೇಲೆ ದಾಳಿ ನಡೆಸಿದ ಇ.ಡಿ ಅಲ್ಲಿ ಶೋಧ ಕಾರ್ಯ ನಡೆಸಿದೆ. ಶಹಜಹಾನ್ ವಿರುದ್ಧ ದಾಖಲಾದ ಭೂ ಕಬಳಿಕೆಯ ಆರೋಪಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಂಜಾಗ್ರತಾ ಕ್ರಮವಾಗಿ ಅರೆಸೇನಾ ಪಡೆಯೊಂದಿಗೆ ಗುರುವಾರ (ಮಾರ್ಚ್‌ 14) ಬೆಳಗ್ಗೆ 6.30ರ ಸುಮಾರಿಗೆ ಇ.ಡಿಯ ವಿವಿಧ ತಂಡಗಳು ದಾಳಿ ನಡೆಸಿವೆ ಎಂದು ವರದಿಗಳು ಹೇಳಿವೆ. ಸಿಬಿಐ ಮತ್ತು ವಿಧಿ ವಿಜ್ಞಾನ ತಂಡದ ಸದಸ್ಯರು ಶೇಖ್ ಶಹಜಹಾನ್‌ನ ಮನೆ ಮತ್ತು ಸಂದೇಶಖಾಲಿಯಲ್ಲಿನ ಆತನ ವಾಣಿಜ್ಯ ಕಟ್ಟಡಗಳ ಮೇಲೆ ದಾಳಿ ನಡೆಸಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ಕಂಡು ಬಂದಿದೆ.

ಏನಿದು ಪ್ರಕರಣ?

ಸಂದೇಶ್‌ಖಾಲಿಯಲ್ಲಿ ಬುಡಕಟ್ಟು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅವರ ಜಾಗ ಅತಿಕ್ರಮಣ, ಹಿಂಸಾಚಾರ ಸೇರಿ ಹಲವು ಪ್ರಕರಣಗಳು ಬೆಳಕಿಗೆ ಬಂದು ತಿಂಗಳ ಹಿಂದೆ ಶಹಜಹಾನ್‌ ಶೇಖ್‌ ಪರಾರಿಯಾಗಿದ್ದ. ಆತನ ವಿರುದ್ಧ ಕೋಲ್ಕೊತಾ ಹೈಕೋರ್ಟ್‌ ಸುಮೋಟೊ ಕೇಸ್‌ ದಾಖಲಿಸಿಕೊಂಡಿತ್ತು. ಇದಾದ ಬಳಿಕ ಶಹಜಹಾನ್‌ ಶೇಖ್‌ನನ್ನು ಬಂಧಿಸಲೇಬೇಕು ಎಂದು ಕೋರ್ಟ್‌ ಆದೇಶ ನೀಡಿತ್ತು. ತಲೆಮರೆಸಿಕೊಂಡಿದ್ದ ಆತನನ್ನು ಫೆಬ್ರವರಿ 29ರಂದು ಬಂಧಿಸಲಾಗಿತ್ತು.

ಈಗಾಗಲೇ ಶಹಜಹಾನ್‌ ಶೇಖ್‌ಗೆ ಸಂಬಂಧಿಸಿದ 12.78 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇ.ಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಸಂದೇಶ್‌ಖಾಲಿಯಲ್ಲಿರುವ ಕೃಷಿ ಭೂಮಿ, ಕೋಲ್ಕೊತಾದಲ್ಲಿರುವ ಅಪಾರ್ಟ್‌ಮೆಂಟ್‌, ಬ್ಯಾಂಕ್‌ ಠೇವಣಿ ಸೇರಿ ಹಲವು ಆಸ್ತಿಗಳನ್ನು ಇ.ಡಿ ಜಪ್ತಿ ಮಾಡಿದೆ. 

ಅಲ್ಲದೆ ಈ ವರ್ಷಾರಂಭದಲ್ಲಿ ಪಡಿತರ ವಿತರಣೆ ಹಗರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಲು ಶಹಜಾನ್‌ ಮನೆಗೆ ಇ.ಡಿ ಅಧಿಕಾರಿಗಳು ತೆರಳಿದ್ದರು. ಈ ಮೇಲೆ ಆತನ ಬೆಂಬಲಿಗರು ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಸಿಬಿಐ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ: Sandeshkhali case: ಸಂದೇಶಖಾಲಿ ಪ್ರಕರಣ; ಬಂಗಾಳದ ಉನ್ನತ ಅಧಿಕಾರಿಗಳ ವಿರುದ್ಧ ಲೋಕಸಭೆ ಸಮಿತಿ ಕ್ರಮಕ್ಕೆ ಸುಪ್ರೀಂ ಕೋರ್ಟ್ ತಡೆ

ಮಹಿಳೆಯರ ಆರೋಪ

ಶಹಜಹಾನ್ ತಲೆಮರೆಸಿಕೊಂಡ ಒಂದು ತಿಂಗಳ ನಂತರ, ಫೆಬ್ರವರಿ 8ರಂದು, ಸಂದೇಶ್‌ಖಾಲಿಯಲ್ಲಿ ಮಹಿಳೆಯರು ಪೊರಕೆ ಮತ್ತು ಬಡಿಗೆಗಳೊಂದಿಗೆ ಬೀದಿಗಿಳಿದಿದ್ದರು. ಶಹಜಹಾನ್ ಮತ್ತು ಆತನ ಸಹಾಯಕರು ವರ್ಷಗಟ್ಟಲೆ ತಮ್ಮ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯ ನಡೆಸಿ ಶೋಷಣೆ ಮಾಡಿದ್ದಾರೆ ಎಂದು ಸ್ಥಳೀಯ ಮಹಿಳೆಯರು ಆರೋಪಿಸಿದ್ದರು. ಈ ಬಗ್ಗೆಯೂ ತನಿಖೆ ನಡೆಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಮಾರ್ಚ್‌ 6ರಂದು ಆತನನ್ನು ಸಿಬಿಐ ವಶಕ್ಕೆ ನೀಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version