ಔರಂಗಾಬಾದ್: ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಪ್ರಧಾನ್ ಮಂತ್ರಿ ಆವಾಸ್ ಯೋಜನೆ ( Pradhan Mantri Awas Yojana- ಬಡಜನರಿಗಾಗಿ ಮನೆ ನಿರ್ಮಾಣ ಮಾಡಿಕೊಡುವ ಸಲುವಾಗಿ ಕೇಂದ್ರ ಸರ್ಕಾರ ಹೊರತಂದಿರುವ ಯೋಜನೆ) ಅನುಷ್ಠಾನದ ವೇಳೆ ಹಗರಣ ನಡೆದಿದೆ ಎಂಬ ಆರೋಪದಡಿ ಇಡಿ ಇಂದು ಅಲ್ಲಿನ ಹಲವು ಭಾಗಗಳಲ್ಲಿ ದಾಳಿ ಮಾಡಿದೆ. ಔರಂಗಾಬಾದ್ ಮುನ್ಸಿಪಲ್ ಕಾರ್ಪೋರೇಶನ್, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಕಟ್ಟುವ ಟೆಂಡರ್ ಕರೆಯುವಾಗ ದೊಡ್ಡ ಮಟ್ಟದಲ್ಲಿ ಹಣ ಅಕ್ರಮ ವರ್ಗಾವಣೆಯಾಗಿದೆ ಎಂಬ ಕಾರಣಕ್ಕೆ ಈ ಶೋಧ ಕಾರ್ಯ ನಡೆದಿದೆ.
ಪಿಎಂ ಆವಾಸ್ ಯೋಜನೆಯಡಿ ವಸತಿ ಗೃಹ ನಿರ್ಮಾಣ ಮಾಡಲು ಬಿಡ್ಡರ್ಸ್ ಆಗಿದ್ದ ಮೂರು ಕಂಪನಿಗಳ ಅಧಿಕಾರಿಗಳು ಇಡೀ ಟೆಂಡರ್ ಪ್ರಕ್ರಿಯೆ ಮೇಲೆ ಹತೋಟಿ ಸಾಧಿಸಿದ್ದಾರೆ. ಟೆಂಡರ್ ಫಾರ್ಮ್ನ್ನು ಔರಂಗಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಪರಿಶೀಲನೆ ಮಾಡಿದಾಗ, ಮೂರು ಕಂಪನಿಗಳ ಅಧಿಕಾರಿಗಳೂ ಒಂದೇ ಇಂಟರ್ನೆಟ್ ಪ್ರೊಟೊಕಾಲ್ ಅಡ್ರೆಸ್ (ಐಪಿ ಅಡ್ರೆಸ್)ನಿಂದಲೇ ಇ-ಟೆಂಡರ್ ಫಾರ್ಮ್ ತೆಗೆದುಕೊಂಡಿದ್ದು ಬೆಳಕಿಗೆ ಬಂದಿದೆ. ಅಂದರೆ ಒಂದೇ ಕಂಪ್ಯೂಟರ್ನಿಂದಲೇ ಆನ್ಲೈನ್ ಮೂಲಕ ಫಾರ್ಮ್ ತೆಗೆದಿದ್ದಾರೆ. ಸ್ಥಳೀಯ ಆಡಳಿತದ ನಿಯಮಕ್ಕೆ ಇದು ತದ್ವಿರುದ್ಧ ಎಂದು ಆರೋಪಿಸಿ, ಔರಂಗಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಪೊಲೀಸರಿಗೆ ದೂರು ನೀಡಿತ್ತು. ಆ ಮೂರು ಕಂಪನಿಗಳ ವಿರುದ್ಧ ಔರಂಗಾಬಾದ್ ಪೊಲೀಸರು ಪ್ರಕರಣ ದಾಖಲು ಮಾಡಿದ್ದರು. ಇಲ್ಲಿ ಕಂಪನಿಗಳು ಹಣ ಅಕ್ರಮ ವರ್ಗಾವಣೆ ಮಾಡಿದ ಆರೋಪ ಕೇಳಿಬಂದಿದ್ದರಿಂದ ಇಡಿ ತನಿಖೆಗೆ ಕೈಗೆತ್ತಿಕೊಂಡಿದೆ. ಮೂರು ಕಂಪನಿಗಳು ಮತ್ತು 19 ಸಿಬ್ಬಂದಿಯ ವಿರುದ್ಧ ಐಪಿಸಿ ಸೆಕ್ಷನ್ನ ಕ್ರಿಮಿನಲ್ ಪಿತೂರಿ, ವಂಚನೆ, ಫೋರ್ಜರಿ ಮತ್ತು ಅಪ್ರಾಮಾಣಿಕ ಆಸ್ತಿ ವಿತರಣೆ ಎಂಬಿತ್ಯಾದಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 402 ಮನೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ
ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿಎಂಎವೈ)ಯನ್ನು ಕೇಂದ್ರ ಸರ್ಕಾರ 2015ರಲ್ಲಿ ಜಾರಿಗೊಳಿಸಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಬಡಜನರಿಗೆ ಮನೆ ಕಟ್ಟಿಸಿಕೊಡುವ ಸಲುವಾಗಿ ಇದನ್ನು ಅನುಷ್ಠಾನ ಮಾಡಲಾಗಿದೆ. ಇದಕ್ಕಾಗಿ ದೊಡ್ಡಮೊತ್ತದ ಹಣವನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ.