ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ಪಡಿತರ ವಿತರಣೆಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಟಿಎಂಸಿಯ ಹಲವು ನಾಯಕರನ್ನು ಬಂಧಿಸಿದ ಬೆನ್ನಲ್ಲೇ ಬಂಗಾಳದ ಸಚಿವ, ಶಾಸಕರಿಗೂ ಇ.ಡಿ ದಾಳಿಯ ಬಿಸಿ ತಾಕಿದೆ. ಪಶ್ಚಿಮ ಬಂಗಾಳದ (West Bengal) ನಾಗರಿಕ ಸಂಸ್ಥೆಗಳಲ್ಲಿ ನಡೆದಿದೆ ಎನ್ನಲಾದ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಸುಜಿತ್ ಬೋಸ್ (Sujit Bose), ಶಾಸಕ ತಪಸ್ ರಾಯ್ (Tapas Roy) ಸೇರಿ ಹಲವು ನಾಯಕರ ಮನೆ, ಕಚೇರಿಗಳ ಮೇಲೆ ಶುಕ್ರವಾರ (ಜನವರಿ 12) ಇ.ಡಿ ಅಧಿಕಾರಿಗಳು ದಾಳಿ (ED Raid) ನಡೆಸಿದ್ದಾರೆ.
ಕೋಲ್ಕೊತಾದಲ್ಲಿರುವ ಸುಜಿತ್ ಬೋಸ್, ತಪಸ್ ರಾಯ್ ಸೇರಿ ಹಲವರ ಮನೆಗಳು, ನಿವಾಸಗಳ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇ.ಡಿ ದಾಳಿ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಚಿವರಾಗಿರುವ ಸುಜಿತ್ ಬೋಸ್ ಅವರ ಎರಡು ನಿವಾಸ ಸೇರಿ ಹಲವೆಡೆ ದಾಳಿ ನಡೆಸಲಾಗಿದೆ. ಉತ್ತರ 24 ಪರಗಣ ಜಿಲ್ಲೆಯಲ್ಲಿರುವ ನಿವಾಸಗಳಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಉತ್ತರ ದುಮ್ ದುಮ್ ಪುರಸಭೆ ಮಾಜಿ ಅಧ್ಯಕ್ಷ ಸುಬೋಧ್ ಚಕ್ರವರ್ತಿ ಅವರಿಗೂ ಇ.ಡಿ ಅಧಿಕಾರಿಗಳು ದಾಳಿಯ ಬಿಸಿ ಮುಟ್ಟಿಸಿದ್ದಾರೆ.
#WATCH | ED raid underway at the premises of West Bengal minister and TMC leader Sujit Bose in Kolkata. Details awaited. pic.twitter.com/qQNCYuSIV5
— ANI (@ANI) January 12, 2024
ಏನಿದು ಪ್ರಕರಣ?
ಕೋಲ್ಕತಾ ವ್ಯಾಪ್ತಿಯ ಪುರಸಭೆಗಳಿಗೆ ನೌಕರರನ್ನು ನೇಮಿಸುವಾಗ ಭಾರಿ ಲಂಚ ಪಡೆಯಲಾಗಿದೆ ಎಂಬ ಪ್ರಕರಣ ಇದಾಗಿದೆ. ಕಳೆದ ವರ್ಷದ ಮಾರ್ಚ್‌ನಲ್ಲಿ ಶಿಕ್ಷಕರ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕೊತಾ ಮೂಲದ ಬಿಲ್ಡರ್ ಆಯನ್ ಶೀಲ್ ಎಂಬಾತನನ್ನು ಇ.ಡಿ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುವ ವೇಳೆ ಪುರಸಭೆ ನೇಮಕದಲ್ಲೂ ಹಗರಣ ನಡೆದಿದೆ ಎಂಬ ವಿಷಯ ಬಯಲಾಗಿದೆ. ಹಾಗಾಗಿ, ಇ.ಡಿ ಅಧಿಕಾರಿಗಳು ಪುರಸಭೆ ನೌಕರರ ನೇಮಕ ವಿಷಯದ ಕುರಿತು ಕೂಡ ತನಿಖೆ ನಡೆಸುತ್ತಿದ್ದಾರೆ. ತನಿಖೆಯ ಭಾಗವಾಗಿಯೇ ಸಚಿವರು, ಶಾಸಕರು ನಿವಾಸ ಮೇಲೆ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Congress MLA: ಕಾಂಗ್ರೆಸ್ ಶಾಸಕನಿಗೆ ಇ.ಡಿ ಶಾಕ್; 5 ಕೋಟಿ ರೂ. ಜಪ್ತಿ, ಶಸ್ತ್ರಾಸ್ತ್ರ ವಶ
ಪಶ್ಚಿಮ ಬಂಗಾಳದಲ್ಲಿ ಪಡಿತರ ಹಂಚಿಕೆ ಹಗರಣವು ಕೂಡ ಇತ್ತೀಚೆಗೆ ಭಾರಿ ಸುದ್ದಿಯಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅರಣ್ಯ ಸಚಿವ ಜ್ಯೋತಿಪ್ರಿಯ ಮಲ್ಲಿಕ್ ಅವರನ್ನು ಕಳೆದ ವರ್ಷದ ಅಕ್ಟೋಬರ್‌ನಲ್ಲಿಯೇ ಬಂಧಿಸಲಾಗಿದೆ. ಜ್ಯೋತಿಪ್ರಿಯ ಅವರು ಆಹಾರ ಸಚಿವರಾಗಿದ್ದಾಗ ಸಾರ್ವಜನಿಕರಿಗೆ ಪಡಿತರ ವಿತರಣೆ ವೇಳೆ ಭಾರಿ ಹಗರಣ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದಷ್ಟೇ ಇ.ಡಿ ಅಧಿಕಾರಿಗಳು ಕೋಲ್ಕೊತಾದ ಹಲವೆಡೆ ದಾಳಿ ನಡೆಸಿ ಟಿಎಂಸಿಯ ಹಲವು ಮುಖಂಡರನ್ನು ಬಂಧಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ