ಹೈದರಾಬಾದ್: ಬೆಂಗಳೂರು ಡ್ರಗ್ಸ್ ಪ್ರಕರಣಕ್ಕೆ (Bengaluru Drugs Case) ಸಂಬಂಧಿಸಿದಂತೆ ಟಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಹಾಗೂ ಭಾರತ್ ರಾಷ್ಟ್ರ ಸಮಿತಿ (BRS) ಶಾಸಕ ಪೈಲಟ್ ರೋಹಿತ್ ರೆಡ್ಡಿ ಅವರಿಗೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದಾರೆ. ಡಿಸೆಂಬರ್ ೧೯ರಂದು ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ೨೦೨೧ರ ಫೆಬ್ರವರಿಯಲ್ಲಿ ನಡೆದ ಪಾರ್ಟಿ ವೇಳೆ ಸುಮಾರು ನಾಲ್ಕು ಕೋಟಿ ರೂ. ಮೌಲ್ಯದ ಡ್ರಗ್ಸ್ ಪತ್ತೆಯಾದ ಪ್ರಕರಣ ಇದಾಗಿದ್ದು, ಪಾರ್ಟಿ ಆಯೋಜಿಸಿದವರಲ್ಲಿ ಒಬ್ಬರಾದ ಕನ್ನಡ ನಿರ್ಮಾಪಕ ಶಂಕರ್ ಗೌಡ ಅವರನ್ನು ಪೊಲೀಸರು ಈಗಾಗಲೇ ವಶಪಡಿಸಿಕೊಂಡಿದ್ದಾರೆ. ಈಗ ಇದೇ ಪ್ರಕರಣದಲ್ಲಿ ರಾಕುಲ್ ಪ್ರೀತ್ ಸಿಂಗ್ ಹಾಗೂ ತಾಂಡೂರು ಶಾಸಕ ಪೈಲಟ್ ರೋಹಿತ್ ರೆಡ್ಡಿ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಟಾಲಿವುಡ್ ನಟ ತನೀಶ್ ಸೇರಿ ಹಲವರ ಹೆಸರುಗಳು ಕೂಡ ಪ್ರಕರಣದಲ್ಲಿ ಕೇಳಿಬಂದಿವೆ. ಕಲಾಹರ್ ರೆಡ್ಡಿ ಅವರ ಜತೆ ರೋಹಿತ್ ರೆಡ್ಡಿ ಅವರೂ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಇನ್ನು, ಪ್ರಕರಣದಲ್ಲಿ ಅಪಾರ ಪ್ರಮಾಣದ ಹಣ ಅಕ್ರಮ ವರ್ಗಾವಣೆಯಾಗಿದ್ದು, ಇದರಲ್ಲಿ ರಾಕುಲ್ ಪ್ರೀತ್ ಸಿಂಗ್ ಅವರ ಹೆಸರು ಕೇಳಿಬಂದಿದೆ. ಹಾಗಾಗಿ, ಇ.ಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ನೋಟಿಸ್ ಸಿಕ್ಕಿರುವ ಕುರಿತು ಪೈಲಟ್ ರೋಹಿತ್ ರೆಡ್ಡಿ ದೃಢಪಡಿಸಿದ್ದಾರೆ. ರಾಕುಲ್ ಪ್ರೀತ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಇದನ್ನೂ ಓದಿ | Drug peddler | ಡ್ರಗ್ಸ್ ಸಾಗಣೆಗೆ ಟಾಕಿಂಗ್ ಟಾಮ್ ಬಳಕೆ; ಖಾಕಿಗೆ ಬಲೆಗೆ ಬಿದ್ದ ಮೂವರು