ನವದೆಹಲಿ: ಕರ್ನಾಟದಲ್ಲಿ ಉಂಟಾದ ಹಿಜಾಬ್ ವಿವಾದದ (Hijab Row) ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. “ಸಮವಸ್ತ್ರದ ಕುರಿತು ನಿಯಮ ರೂಪಿಸುವ ಅಧಿಕಾರ ಶಿಕ್ಷಣ ಸಂಸ್ಥೆಗಳಿಗಿದೆ” ಎಂದು ಹೇಳಿದೆ. ನ್ಯಾಯಾಲಯದ ಅಭಿಪ್ರಾಯವು ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ ಅರ್ಜಿದಾರರಿಗೆ ಹಿನ್ನಡೆಯುಂಟು ಮಾಡಿದೆ ಎಂದೇ ಹೇಳಲಾಗುತ್ತಿದೆ.
ಹಿಜಾಬ್ ವಿವಾದದ ಕುರಿತು ಗುರುವಾರ ಆರನೇ ದಿನದ ವಿಚಾರಣೆ ನಡೆಸಿದ ನ್ಯಾಯಾಲಯವು, ವಾದ-ಪ್ರತಿವಾದ ಆಲಿಸಿತು. ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಹುಫೇಜಾ ಅಹ್ಮದಿ, “ಹಿಜಾಬ್ ನಿಷೇಧದಿಂದಾಗಿ ಕರ್ನಾಟಕದಲ್ಲಿ ಸುಮಾರು ೧೭ ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿಲ್ಲ ಎಂಬುದಾಗಿ ನನ್ನ ಗೆಳೆಯರೊಬ್ಬರು (ಸಹೋದ್ಯೋಗಿ ವಕೀಲ) ಹೇಳಿದ್ದಾರೆ. ಹಿಜಾಬ್ ನಿಷೇಧದಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಹೆಚ್ಚಿದೆ” ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಹಾಗೂ ಸುಧಾಂಶು ಧುಲಿಯಾ ನೇತೃತ್ವದ ನ್ಯಾಯಪೀಠವು, “ಹೀಗೆ ಶಿಕ್ಷಣದಿಂದ ವಂಚಿತರಾದ ಮಕ್ಕಳ ಕುರಿತು ನಿಖರ ಮಾಹಿತಿ ಒದಗಿಸಿ” ಎಂದು ತಿಳಿಸಿತು. ಹಾಗೆಯೇ, “ನಿಯಮಗಳ ಪ್ರಕಾರ, ಸಮವಸ್ತ್ರದ ಕುರಿತು ನಿಯಮ ರೂಪಿಸುವ ಹಕ್ಕು ಶಿಕ್ಷಣ ಸಂಸ್ಥೆಗಳಿಗೆ ಇದೆ” ಎಂದಿತು. ಸೆ.೧೯ರಂದು ಮತ್ತೆ ವಿಚಾರಣೆ ನಡೆಸುವುದಾಗಿ ತಿಳಿಸಿತು.
ಕರ್ನಾಟಕದಲ್ಲಿ ಶುರುವಾಗಿ, ದೇಶಾದ್ಯಂತ ಸುದ್ದಿಯಾದ ಹಿಜಾಬ್ ವಿವಾದವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಕರ್ನಾಟಕ ಸರ್ಕಾರವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದ್ದನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿವೆ. ಇವುಗಳ ಕುರಿತು ನ್ಯಾಯಾಲಯವು ಆರು ದಿನದಿಂದ ವಿಚಾರಣೆ ನಡೆಸುತ್ತಿದೆ.
ಇದನ್ನೂ ಓದಿ | Hijab Row | ಸಿಖ್ಖರ ಪೇಟ, ಕೃಪಾಣದ ಜತೆ ಹಿಜಾಬ್ ಹೋಲಿಸುವುದು ಸರಿಯಲ್ಲ ಎಂದ ಸುಪ್ರೀಂ ಕೋರ್ಟ್