Site icon Vistara News

ಮೋದಿಯನ್ನು ಇನ್ನಷ್ಟು ಬಲಪಡಿಸಲು ಬಿಜೆಪಿ ಸೇರಿದ್ದೇವೆ: ಗೋವಾದಲ್ಲಿ ʼಕೈʼ ಬಿಟ್ಟ 8 ಶಾಸಕರ ಮಾತು!

Goa Congress

ಪಣಜಿ: ಕಾಂಗ್ರೆಸ್​​ ನಾಯಕರು ಭಾರತ್ ಜೋಡೋ ಯಾತ್ರೆಯ ದೂರವನ್ನು ಕ್ರಮಿಸುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ಛೋಡೋ ಅಭಿಯಾನ ಮುಂದುವರಿದಿದೆ. ಗೋವಾದಲ್ಲಿಂದು ಕಾಂಗ್ರೆಸ್​ಗೆ (Goa Congress) ದೊಡ್ಡ ಹಿನ್ನಡೆಯಾಗಿದೆ. ಆ ರಾಜ್ಯದಲ್ಲಿ ಇದ್ದ 11 ಕಾಂಗ್ರೆಸ್​ ಶಾಸಕರಲ್ಲಿ ಎಂಟು ಮಂದಿ ಕಮಲ ಹಿಡಿದಿದ್ದಾರೆ. ಗೋವಾ ಮುಖ್ಯಮಂತ್ರಿ, ಬಿಜೆಪಿ ನಾಯಕ ಪ್ರಮೋದ್​ ಸಾವಂತ್​ ಮತ್ತು ಬಿಜೆಪಿ ರಾಜ್ಯ ಮುಖ್ಯಸ್ಥ ಸದಾನಂದ್​ ಶೇಟ್ ತನಾವಡೆ ಸಮ್ಮುಖದಲ್ಲಿ ಇವರೆಲ್ಲ ಬಿಜೆಪಿಗೆ ಕಾಲಿಟ್ಟಿದ್ದಾರೆ. ಅಲ್ಲಿಗೆ ಜುಲೈ ತಿಂಗಳಿಂದ ಕಾಂಗ್ರೆಸ್​ನಲ್ಲಿ ಶುರುವಾಗಿದ್ದ ಬಂಡಾಯಕ್ಕೆ ಒಂದು ಅಂತ್ಯ ಸಿಕ್ಕಂತಾಗಿದೆ.

ಕಾಂಗ್ರೆಸ್​​ನ ದಿಗಂಬರ್​ ಕಾಮತ್​, ಮೈಕೆಲ್ ಲೋಬೋ, ದೆಲಿಲಾ ಲೋಬೊ, ರಾಜೇಶ್ ಫಾಲ್ದೇಸಾಯಿ, ಕೇದಾರ್ ನಾಯಕ್, ಸಂಕಲ್ಪ್ ಅಮೋನ್ಕರ್, ಅಲೆಕ್ಸೊ ಸಿಕ್ವೇರಾ ಮತ್ತು ರುಡಾಲ್ಫ್ ಫರ್ನಾಂಡಿಸ್ ಬಿಜೆಪಿ ಸೇರ್ಪಡೆಯಾಗಿದ್ದು, ಅದಕ್ಕೂ ಮೊದಲು ಇವರೆಲ್ಲ ಸೇರಿ ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ ನಡೆಸಿದ್ದರು. ಬಿಜೆಪಿ ಸೇರ್ಪಡೆಯಾಗುವ ನಿರ್ಣಯವನ್ನು ಅದೇ ಸಭೆಯಲ್ಲಿ ಕೈಗೊಂಡಿದ್ದರು. ಇನ್ನುಳಿದ ಶಾಸಕರಾದ ಯೂರಿ ಅಲೆಮಾವೊ, ಆಲ್ಟೋನ್ ಡಿ’ಕೋಸ್ಟಾ ಮತ್ತು ಕಾರ್ಲೋಸ್ ಅಲ್ವಾರೆಸ್ ಫೆರೇರಾ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ ಮತ್ತು ಅವರು ಬಿಜೆಪಿಗೆ ಸೇರಲೂ ಇಲ್ಲ.

ಗೋವಾ ವಿಧಾನಸಭೆಯಲ್ಲಿ ಬಿಜೆಪಿ ಇಷ್ಟುದಿನ 20 ಶಾಸಕರನ್ನು ಹೊಂದಿತ್ತು. ಅದರ ಬಲವೀಗ 28ಕ್ಕೆ ಏರಿಕೆಯಾಗಿದೆ. ಪ್ರತಿಪಕ್ಷ ಕಾಂಗ್ರೆಸ್​ ಬಲ 11ರಿಂದ 3ಕ್ಕೆ ಇಳಿಕೆಯಾಗಿದೆ. ಇದೀಗ ಕಾಂಗ್ರೆಸ್​ ಶಾಸಕರು ಬಿಜೆಪಿಯನ್ನು ಸೇರಿದ ಬೆನ್ನಲ್ಲೇ, ಅಲ್ಲಿ ಮತ್ತೇನಾದರೂ ಸಂಪುಟ ಮರುರಚನೆಯಾಗಲಿದೆಯಾ? ಕಾಂಗ್ರೆಸ್​ನಿಂದ ಹೋದವರಿಗೆ ಸಚಿವ ಸ್ಥಾನ ಸಿಗಲಿದೆಯಾ? ಎಂಬ ಪ್ರಶ್ನೆಯೂ ಉದ್ಭವ ಆಗಿದ್ದು, ಸದ್ಯಕ್ಕಂತೂ ಅಂಥ ಯಾವುದೇ ನಿರ್ಧಾರ ಇಲ್ಲ. ಇದೀಗ ಬಂದಿರುವ ಕಾಂಗ್ರೆಸ್ಸಿಗರು ಯಾವುದೇ ಷರತ್ತುಗಳನ್ನು ವಿಧಿಸಿಲ್ಲ. ಸಚಿವ ಸ್ಥಾನಕ್ಕೆ ಬೇಡಿಕೆಯನ್ನೂ ಇಟ್ಟಿಲ್ಲ ಎಂದು ಪ್ರಮೋದ್​ ಸಾವಂತ್ ಸ್ಪಷ್ಟಪಡಿಸಿದ್ದಾರೆ. ಹಾಗಿದ್ದಾಗ್ಯೂ ಸದ್ಯ ಇರುವ ಮೂವರು ಸಚಿವರನ್ನು ಕೈಬಿಟ್ಟು, ಕಾಂಗ್ರೆಸ್​ನಿಂದ ಹೋದ ದಿಗಂಬರ್ ಕಾಮತ್​ ಮತ್ತು ಮೈಕೆಲ್ ಲೋಬೋಗೆ ಸಚಿವ ಸ್ಥಾನ ನೀಡಲು ಚಿಂತನೆ ನಡೆದಿದೆ ಎಂದು ಗೋವಾ ಬಿಜೆಪಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಇದೇ ವರ್ಷ ಜುಲೈನಲ್ಲಿ ಮೈಕೆಲ್​ ಲೋಬೋ ಮತ್ತು ದಿಗಂಬರ್ ಕಾಮತ್​ ಸೇರಿ ಎಂಟು ಶಾಸಕರು ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿದ್ದರು. ಆಗಿನಿಂದಲೇ ಬಂಡಾಯದ ಗಾಳಿ ಎದ್ದಿತ್ತು. ಗೋವಾದ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್​ ಇವರಿಬ್ಬರ ವಿರುದ್ಧ ಆರೋಪ ಮಾಡಿದ್ದರು ಮತ್ತು ಇಬ್ಬರೂ ನಾಯಕರನ್ನೂ ಕಾಂಗ್ರೆಸ್​ನಿಂದ ಅನರ್ಹಗೊಳಿಸಲಾಗಿತ್ತು. ಉಳಿದ ಆರು ಶಾಸಕರು ಕಾಂಗ್ರೆಸ್​ನಲ್ಲಿಯೇ ಉಳಿದಿದ್ದರು. ಕಳೆದ ಎರಡು ತಿಂಗಳಿಂದ ಕಾಂಗ್ರೆಸ್​ನಲ್ಲಿ ಎಲ್ಲವೂ ತಣ್ಣಗಾದ ಲಕ್ಷಣ ಗೋಚರಿಸಿತ್ತು. ಆದರೆ ಈಗ ಎಂಟೂ ಜನ ಬಿಜೆಪಿಗೆ ಬಂದಿದ್ದಾರೆ. ‘ಪ್ರಧಾನಿ ನರೇಂದ್ರ ಮೋದಿಯನ್ನು ಇನ್ನಷ್ಟು ಬಲ ಪಡಿಸುವ ಉದ್ದೇಶದಿಂದ ಬಿಜೆಪಿ ಸೇರಿದ್ದೇವೆ’ ಎಂದು ಲೋಬೋ ಹೇಳಿದ್ದಾರೆ.

ಇದನ್ನೂ ಓದಿ: ಗೋವಾದಲ್ಲಿ 8 ಕಾಂಗ್ರೆಸ್‌ ಶಾಸಕರು ಬಿಜೆಪಿ ಸೇರಲು ರೆಡಿ, ಸಿಎಂ ಪ್ರಮೋದ್​ ಸಾವಂತ್ ಭೇಟಿ

Exit mobile version