Site icon Vistara News

Bus Accident: ಪ್ರವಾಸಕ್ಕೆ ಹೊರಟಿದ್ದ ಬಸ್‌ ಪ್ರಪಾತಕ್ಕೆ ಬಿದ್ದು 8 ಜನರ ದುರ್ಮರಣ, ಹಲವರ ಸ್ಥಿತಿ ಗಂಭೀರ!

Tamil Nadu Bus Accident

Eight Dead, Several Injured After Tourist Bus Falls Into Gorge In Tamil Nadu

ಚೆನ್ನೈ: ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ (Nilgiris) ಭೀಕರ ಅಪಘಾತ (Bus Accident) ಸಂಭವಿಸಿದೆ. ನೀಲಗಿರಿ ಜಿಲ್ಲೆ ಕುನೂರು ತಾಲೂಕು ಮರಪಲಂ ಗ್ರಾಮದ ಬಳಿ ಪ್ರವಾಸಕ್ಕೆ ಹೊರಟಿದ್ದ ಬಸ್‌ ಪ್ರಪಾತಕ್ಕೆ ಉರುಳಿದ್ದು, ಇಬ್ಬರು ಚಾಲಕರು ಸೇರಿ ಎಂಟು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಸುಮಾರು 35 ಜನರಿಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಬೆಟ್ಟ-ಕಣಿವೆಗಳಿಂದ ಕೂಡಿರುವ ಕುನೂರಿನಲ್ಲಿ ಶನಿವಾರ ಸಂಜೆ (ಸೆಪ್ಟೆಂಬರ್‌ 30) ಬಸ್‌ ತೆರಳುವಾಗ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ. ತುಂಬ ಕಿರಿದಾದ, ತಿರುವಿನಿಂದ ಕೂಡಿರುವ ರಸ್ತೆಯಲ್ಲಿ ಚಲಿಸುವಾಗ ವಾಹನ ಚಾಲಕನ ನಿಯಂತ್ರಣ ತಪ್ಪಿ ಕಂದಕ್ಕೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಆದಾಗ್ಯೂ, ಅಪಘಾತಕ್ಕೆ ನಿಖರ ಕಾರಣ ಇದುವರೆಗೆ ತಿಳಿದುಬಂದಿಲ್ಲ.

“ಊಟಿಯಿಂದ ಮೆಟ್ಟುಪಾಲಯಂಗೆ ಬಸ್‌ ಹೊರಟಿತ್ತು. ಪ್ರವಾಸಕ್ಕೆ ಹೊರಟಿದ್ದ ಬಸ್‌ನಲ್ಲಿ ಸುಮಾರು 59 ಜನ ಪ್ರಯಾಣಿಸುತ್ತಿದ್ದರು. ಇದೇ ವೇಳೆ ಬಸ್‌ ಕಂದಕಕ್ಕೆ ಉರುಳಿದೆ. ಕೂಡಲೇ ಸ್ಥಳೀಯರು ಹಾಗೂ ಸಿಬ್ಬಂದಿಯು 100 ಅಡಿ ಆಳದ ಕಂದಕಕ್ಕೆ ಬಿದ್ದವರನ್ನು ರಕ್ಷಿಸಿದರು. ಆದರೆ, ಆಸ್ಪತ್ರೆಗೆ ಹೋಗುವಷ್ಟರಲ್ಲಿ ಎಂಟು ಜನ ಮೃತಪಟ್ಟಿದ್ದರು. ಉಳಿದ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Road Accident: KSRTC ಬಸ್‌- ಕಾರು ಅಪಘಾತ; ವಿಜಯನಗರದ ಪ್ರೊಫೆಸರ್‌, ತಂದೆ ಸ್ಥಳದಲ್ಲೇ ಮೃತ್ಯು

2 ಲಕ್ಷ ರೂಪಾಯಿ ಪರಿಹಾರ ಘೋಷಣೆ

ಪ್ರವಾಸಕ್ಕೆ ಹೊರಟಿದ್ದ ಬಸ್‌ ಕಂದಕಕ್ಕೆ ಉರುಳಿ ಎಂಟು ಜನ ಮೃತಪಟ್ಟಿರುವ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಸಂತಾಪ ಸೂಚಿಸಿದ್ದಾರೆ. ಹಾಗೆಯೇ, ಮೃತಪಟ್ಟ ಕುಟುಂಬಸ್ಥರಿಗೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಹಾಗೆಯೇ, ಗಾಯಾಳುಗಳ ಚಿಕಿತ್ಸೆಗೆ ಸಕಲ ರೀತಿಯ ವ್ಯವಸ್ಥೆ ಮಾಡುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

Exit mobile version