ರಾಂಚಿ: ಅಪರೂಪದಲ್ಲಿ ಅಪರೂಪ ಎಂಬಂತೆ ಜಾರ್ಖಂಡ್‌ನ ರಾಂಚಿಯಲ್ಲಿ 21 ದಿನದ ಹೆಣ್ಣು ಮಗುವಿನ ಹೊಟ್ಟೆಯಲ್ಲಿ ಎಂಟು ಭ್ರೂಣಗಳು (Fetuses Inside A Baby) ಪತ್ತೆಯಾಗಿವೆ. “ಇಂತಹ ಪ್ರಕರಣಗಳನ್ನು ವೈದ್ಯಕೀಯ ಪರಿಭಾಷೆಯಲ್ಲಿ Fetus-In-Fetu (FIF) ಎಂದು ಕರೆಯುತ್ತಾರೆ. ಆದರೆ, ಒಂದೇ ಮಗುವಿನ ಹೊಟ್ಟೆಯಲ್ಲಿ 8 ಭ್ರೂಣಗಳು ಪತ್ತೆಯಾಗಿರುವುದು ಜಗತ್ತಿನಲ್ಲಿಯೇ ಮೊದಲು ಇರಬೇಕು” ಎಂದು ಮಗುವಿನ ಸರ್ಜರಿ ಮಾಡಿದ ಖಾಸಗಿ ಆಸ್ಪತ್ರೆ ವೈದ್ಯ ಮೊಹಮ್ಮದ್ ಇಮ್ರಾನ್ ತಿಳಿಸಿದ್ದಾರೆ.
ರಾಂಚಿಯ ರಾಮಗಢ ಜಿಲ್ಲೆ ಸರ್ಕಾರಿ ಆಸ್ಪತ್ರೆಯಲ್ಲಿ ಅಕ್ಟೋಬರ್ 10ರಂದು ಮಗು ಜನಿಸಿದೆ. ಮಗುವಿನ ಹೊಟ್ಟೆಯು ದಪ್ಪವಿದ್ದ ಕಾರಣ ಹಾಗೂ ಸ್ಕ್ಯಾನ್ ಮಾಡಿದ ಬಳಿಕ ಹೊಟ್ಟೆಯಲ್ಲಿ ಗಡ್ಡೆಗಳಿರುವುದು ಪತ್ತೆಯಾದ ಕಾರಣ ಸರ್ಜರಿ ಮಾಡಬೇಕು ಎಂದು ವೈದ್ಯರು ಹೇಳಿದ್ದಾರೆ. ಆದರೆ, ಹುಟ್ಟಿದ ಶಿಶುವಿಗೆ ಆಪರೇಷನ್ ಮಾಡುವುದು ಕಷ್ಟವಾದ ಕಾರಣ ಒಂದಷ್ಟು ದಿನ ಮುಂದೂಡಲಾಗಿದೆ. ಕಳೆದ ಬುಧವಾರ (ನವೆಂಬರ್ 2) ರಾಂಚಿಯ ಖಾಸಗಿ ಆಸ್ಪತ್ರೆಯಲ್ಲಿ ಸರ್ಜರಿ ಮಾಡಿದಾಗ ಮಗುವಿನ ಹೊಟ್ಟೆಯಲ್ಲಿ 8 ಭ್ರೂಣಗಳು ಪತ್ತೆಯಾಗಿವೆ.
“ಮಗುವಿಗೆ 21 ದಿನ ತುಂಬಿದ ಬಳಿಕ ಸರ್ಜರಿ ಮಾಡಲಾಗಿದೆ. ಸಿಟಿ ಸ್ಕ್ಯಾನ್ ಮಾಡಿದಾಗ ಹೊಟ್ಟೆಯಲ್ಲಿ ಗಡ್ಡೆಗಳು ಇರಬೇಕು ಎಂದು ಅಂದಾಜಿಸಲಾಗಿತ್ತು. ಆದರೆ, ಸರ್ಜರಿ ಮಾಡಿದಾಗಲೇ ಅವು ಭ್ರೂಣಗಳು ಎಂಬುದು ಗೊತ್ತಾಗಿದೆ. ಇದು ವೈದ್ಯಕೀಯ ಲೋಕದಲ್ಲಿ ವಿರಳ ನಿದರ್ಶನ. ಮಗುವಿನ ಆರೋಗ್ಯ ಸುಧಾರಿಸಿದ್ದು, ಯಾವುದೇ ಅಪಾಯವಿಲ್ಲ” ಎಂದು ಡಾ.ಮೊಹಮ್ಮದ್ ಇಮ್ರಾನ್ ಮಾಹಿತಿ ನೀಡಿದ್ದಾರೆ. ಐದು ಲಕ್ಷ ಮಕ್ಕಳಲ್ಲಿ ಒಂದು ಮಗುವಿಗೆ Fetus-In-Fetu ಬಾಧಿಸುತ್ತದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | ಹೊಟ್ಟೆ ಊದಿಕೊಂಡಿದ್ದ ನವಜಾತ ಶಿಶುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ; ವೈದ್ಯರೇ ಕಂಗಾಲು !