Site icon Vistara News

ಉದ್ಧವ್ ಠಾಕ್ರೆಗೆ ಬರ್ತ್​ ಡೇ ವಿಶ್​ ಮಾಡಿದ ಶಿಂಧೆ; ಪದ ಪ್ರಯೋಗದಲ್ಲಿ ಚಾಣಾಕ್ಷತನ ತೋರಿದ ಮುಖ್ಯಮಂತ್ರಿ !

Uddhav Thackeray question Speaker order of real shiv sena in Supreme Court

ಇಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ, ಶಿವಸೇನೆ ಅಧ್ಯಕ್ಷ ಉದ್ಧವ್​ ಠಾಕ್ರೆ ಹುಟ್ಟಿದ ದಿನ. 62ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಉದ್ಧವ್ ಠಾಕ್ರೆಗೆ ಮಹಾರಾಷ್ಟ್ರದ ಈಗಿನ ಮುಖ್ಯಮಂತ್ರಿ, ಶಿವಸೇನೆಯ ಪ್ರಬಲ ನಾಯಕ ಏಕನಾಥ ಶಿಂಧೆ ಶುಭಕೋರಿದ್ದಾರೆ. ಟ್ವೀಟ್ ಮಾಡಿರುವ ಅವರು, ‘ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಜನ್ಮದಿನದ ಶುಭಾಶಯಗಳು. ಮಾತೆ ಜಗದಂಬ, ಅವರಿಗೆ ದೀರ್ಘಾಯುಷ್ಯ, ಆರೋಗ್ಯ ಕೊಡಲಿ ಎಂದು ಬೇಡಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ. ಆದರೆ ಇಲ್ಲಿ ಅಚ್ಚರಿಯ ವಿಷಯವೆಂದರೆ ಉದ್ಧವ್​ ಠಾಕ್ರೆಯನ್ನು ಶಿಂಧೆ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಎಂದು ಕರೆದರೇ ಹೊರತು, ಶಿವಸೇನೆಯ ಅಧ್ಯಕ್ಷ (President Of Shiv Sena) ಎಂದು ಉಲ್ಲೇಖಿಸಲಿಲ್ಲ..!

ಶಿವಸೇನೆಯಲ್ಲಿ ಎರಡು ಬಣಗಳಾಗಿವೆ. ನಿಜವಾದ ಶಿವಸೇನೆ ಯಾವುದು ಎಂಬ ಬಗ್ಗೆ ಈ ಎರಡು ಬಣಗಳ ಮಧ್ಯೆಯೇ ಜಟಾಪಟಿ ನಡೆಯುತ್ತಿದೆ. ಈ ಹೊತ್ತಲ್ಲಿ ಏಕನಾಥ ಶಿಂಧೆ ಮಾಡಿದ ಈ ಟ್ವೀಟ್ ಸಹಜವಾಗಿಯೇ ಮಹತ್ವ ಪಡೆದುಕೊಂಡಿದೆ. ಶಿವಸೇನೆಯ ಹೆಚ್ಚಿನ ಸದಸ್ಯರು ನನ್ನ ಬಣದಲ್ಲಿಯೇ ಇದ್ದಾರೆ ಹಾಗಾಗಿ ನಮ್ಮದೇ ನೈಜ ಶಿವಸೇನೆ ಎಂದು ಶಿಂಧೆ ಹೇಳುತ್ತಿದ್ದರೆ, ‘ನೀವು ಬಂಡಾಯವೆದ್ದಾಗಲೇ ಶಿವಸೇನೆ ಬಿಟ್ಟಿದ್ದೀರಿ ಎಂದು ಅರ್ಥ. ಹಾಗಾಗಿ ನಾವೇ ನಿಜವಾದ ಶಿವಸೇನೆ’ ಎಂದು ಉದ್ಧವ್​ ಠಾಕ್ರೆ ಹೇಳುತ್ತಿದ್ದಾರೆ. ಈ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ ಮತ್ತು ಚುನಾವಣಾ ಆಯೋಗದ ಎದುರು ಕೂಡ ಮಂಡನೆಯಾಗಿದೆ. ತಾವೇ ಶಿವಸೇನೆ ಎನ್ನುತ್ತಿರುವ ಎರಡೂ ಬಣಗಳನ್ನು ಆಗಸ್ಟ್​ 8ರ ಒಳಗೆ ಅದನ್ನು ಸಾಕ್ಷೀಕರಿಸುವ ದಾಖಲೆಯನ್ನು ನಮಗೆ ನೀಡಬೇಕು ಎಂದು ಎಲೆಕ್ಷನ್ ಕಮಿಷನ್ ಹೇಳಿದೆ.

ಇತ್ತೀಚೆಗೆ ಉದ್ಧವ್ ಠಾಕ್ರೆ ಶಿವಸೇನೆಯ ಮುಖವಾಣಿ ಪತ್ರಿಕೆ ಸಾಮ್ನಾದ ಸಂಪಾದಕ ಸಂಜಯ್ ರಾವತ್​ಗೆ ಸಂದರ್ಶನ ಕೊಡುತ್ತ, ‘ನಾನು ಅನಾರೋಗ್ಯದಿಂದ ಬಳಲುತ್ತ ಆಸ್ಪತ್ರೆಯಲ್ಲಿ ಮಲಗಿದ್ದಾಗಲೇ ನನ್ನ ವಿರುದ್ಧ ಷಡ್ಯಂತ್ರ ನಡೆದಿತ್ತು. ನನಗೆ ಅರಿವಿಲ್ಲದೆ, ನಾಯಕತ್ವವನ್ನು ಇನ್ನೊಬ್ಬರಿಗೆ ವಹಿಸಲಾಗಿತ್ತು’ ಎಂದು ಹೇಳಿದ್ದರು. ಏಕನಾಥ ಶಿಂಧೆ ಮತ್ತು ಉದ್ಧವ್ ಠಾಕ್ರೆ ಹೀಗೆ ಸಮಯ ಸಿಕ್ಕಾಗಲೆಲ್ಲ ಪರಸ್ಪರ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಹೇಗಾದರೂ ಸರಿ ಶಿವಸೇನೆಯ ಸಂಪೂರ್ಣ ನಿಯಂತ್ರಣವನ್ನು ತಾವೇ ಉಳಿಸಿಕೊಳ್ಳಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ. ಇದೇ ಕಾರಣಕ್ಕೆ ಏಕನಾಥ ಶಿಂಧೆಯವರು ಉದ್ಧವ್ ಠಾಕ್ರೆಯನ್ನು ಶಿವಸೇನೆ ಅಧ್ಯಕ್ಷ ಎಂದು ಉಲ್ಲೇಖಿಸಲಿಲ್ಲ. ಹಾಗೊಮ್ಮೆ ಕರೆದುಬಿಟ್ಟರೆ, ಅವರ ಬಣವೇ ಅಧಿಕೃತ ಶಿವಸೇನೆ ಎಂದಾಗಿಬಿಡುತ್ತದೆ ಎಂಬುದು ಅವರ ಆಲೋಚನೆ. ಹಾಗಾಗಿ ತುಂಬ ಚಾಣಾಕ್ಷತೆಯಿಂದ ಬರ್ತ್​ ಡೇ ವಿಶ್​ ಮಾಡಿದ್ದಾರೆ.

ಇದನ್ನೂ ಓದಿ: ಏಕನಾಥ ಶಿಂಧೆ, ಉದ್ಧವ್‌ ಠಾಕ್ರೆಗೆ ಚುನಾವಣಾ ಆಯೋಗ ನೋಟಿಸ್‌; ಆಗಸ್ಟ್‌ 8 ಡೆಡ್‌ಲೈನ್‌

Exit mobile version