ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ (Eknath Shinde) ಅವರು ಶಿಕ್ಷಣದತ್ತ ಹೆಚ್ಚಿನ ಒಲವಿರುವ ವ್ಯಕ್ತಿ. ಇದೀಗ ಅವರು ಪತ್ರಿಕೋದ್ಯಮ ವಿಭಾಗದಲ್ಲಿ ಯಶವಂತ್‌ರಾವ್ ಚವನ್ ಮಹಾರಾಷ್ಟ್ರ ಮುಕ್ತ ವಿಶ್ವವಿದ್ಯಾಲಯದಿಂದ (ವೈಸಿಎಂಒಯು) ಪದವಿಯನ್ನೂ ಪಡೆದುಕೊಂಡಿದ್ದಾರೆ.
ವಿಶ್ವವಿದ್ಯಾಲಯವೇ ಈ ಬಗ್ಗೆ ಪ್ರಕಟಣೆ ಹೊರಡಿಸಿದೆ. ಹಾಗೆಯೇ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ.ಪ್ರಶಾಂತ್ ಕುಮಾರ್ ಪಾಟೀಲ್ ಅವರು ಏಕನಾಥ ಶಿಂಧೆ ಅವರ ನಿವಾಸವಾದ ʼವರ್ಷʼಕ್ಕೆ ಭೇಟಿ ಕೊಟ್ಟು, ಪದವಿಯ ಪ್ರಮಾಣ ಪತ್ರವನ್ನು ಶಿಂಧೆ ಅವರಿಗೆ ಹಸ್ತಾಂತರಿಸಿದ್ದಾರೆ.
ಇದನ್ನೂ ಓದಿ: Maharashtra Cabinet Expansion | ಏಕನಾಥ ಶಿಂಧೆ ಸಂಪುಟ ಸೇರಿದ 18 ಸಚಿವರು; 9+9 ಸೂತ್ರ
ವೈಸಿಎಂಒಯುನಿಂದ ಇದು ಮೂರನೇ ಪದವಿ
ಅಂದಹಾಗೆ ಏಕನಾಥ ಶಿಂಧೆ ಅವರು ಈ ಹಿಂದೆ ಇದೇ ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿಯೂ ಪದವಿ ಪಡೆದುಕೊಂಡಿದ್ದರು. ಹಾಗೆಯೇ ಹ್ಯೂಮನ್ ರೈಟ್ಸ್ ವಿಭಾಗದಲ್ಲೂ ಪದವಿ ಪಡೆದುಕೊಂಡಿದ್ದಾರೆ. ಹಾಗಾಗಿ ವೈಸಿಎಂಒಯು ಇಂದ ಏಕನಾಥ ಶಿಂಧೆ ಅವರು ಪಡೆದ ಮೂರನೇ ಪದವಿ ಪ್ರಮಾಣ ಪತ್ರ ಇದಾಗಿದೆ.
ಈ ಬಗ್ಗೆ ಉಪಕುಲಪತಿ ಪ್ರಶಾಂತ್ ಕುಮಾರ್ ಪಾಟೀಲ್ ಮಾತನಾಡಿ, “ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಯಶಸ್ಸು ಮಹಾರಾಷ್ಟ್ರದ ಅನೇಕ ವಿದ್ಯಾರ್ಥಿಗಳ ಶಿಕ್ಷಣದ ಕನಸನ್ನು ಪೂರ್ಣಗೊಳಿಸಿದ ವೈಸಿಎಂಒಯು ಖ್ಯಾತಿಯನ್ನು ಹೆಚ್ಚಿಸಿದೆ. ಅವರಿಗೆ ಪ್ರಮಾಣಪತ್ರ ನೀಡುವಾಗ ಉಪಕುಲಪತಿಯಾದ ನನಗೆ ಖುಷಿಯಾಗಿದೆ” ಎಂದು ಹೇಳಿದ್ದಾರೆ.