ಮುಂಬಯಿ: ಉದ್ಧವ್ ಠಾಕ್ರೆ ರಾಜೀನಾಮೆ ಕೊಟ್ಟ ನಂತರ, ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂದೇ ಹೇಳಲಾಗುತ್ತಿತ್ತು. ಈಗ ಅರ್ಧಗಂಟೆ ಹಿಂದಿನವರೆಗೂ ಅದೇ ಸುದ್ದಿಯೇ ವ್ಯಾಪಕವಾಗಿ ಹರಡಿತ್ತು. ಆದರೆ ಈಗೊಂದು ಅಚ್ಚರಿಯ ಬೆಳವಣಿಗೆ ನಡೆದಿದೆ. ” ನಾನು ಮಹಾರಾಷ್ಟ್ರ ಮುಖ್ಯಮಂತ್ರಿಯಾಗುವುದಿಲ್ಲ. ಏಕನಾಥ ಶಿಂಧೆ(Eknath Shinde)ಯವರು ಸಿಎಂ ಹುದ್ದೆಗೆ ಏರಲಿದ್ದಾರೆ” ಎಂದು ದೇವೇಂದ್ರ ಫಡ್ನವೀಸ್ ಅವರು ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ. ಅದರಂತೆ ಏಕನಾಥ್ ಶಿಂಧೆ ಇಂದು ಸಂಜೆ 7.30ಕ್ಕೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಇಂದು ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದ ನಂತರ ಮಾತನಾಡಿದ ದೇವೇಂದ್ರ ಫಡ್ನವೀಸ್, “ನಾನು ಹೊಸ ಸರ್ಕಾರದಲ್ಲಿ ಯಾವುದೇ ಹುದ್ದೆ ನಿಭಾಯಿಸುವುದಿಲ್ಲ. ಇದು ಬಿಜೆಪಿ ಸರ್ಕಾರಲ್ಲ, ಬದಲಿಗೆ ಶಿಂಧೆ ಸರ್ಕಾರವಾಗಿರುತ್ತದೆ. ರಾಜ್ಯದಲ್ಲಿ ಬಹುಕಾಲದಿಂದ ಇರುವ ಹಲವು ಸಮಸ್ಯೆಗಳನ್ನು ಏಕನಾಥ ಶಿಂಧೆ ನೇತೃತ್ವದ ಸರ್ಕಾರ ಬಗೆಹರಿಸಲಿದೆ ಎಂಬ ನಂಬಿಕೆ ನನಗಿದೆ. ಮರಾಠರಿಗೆ, ಒಬಿಸಿಗಳಿಗೆ ಮೀಸಲಾತಿ ಮತ್ತು ಅಪೂರ್ಣಗೊಂಡಿರುವ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಈಗಿನ ಹೊಸ ಸರ್ಕಾರದ ಆದ್ಯತೆಯಾಗಲಿದೆ ಎಂದು ತಿಳಿಸಿದ್ದಾರೆ.
‘ಬಿಜೆಪಿಯ ಈ ನಡೆಯಿಂದ ನಿಜಕ್ಕೂ ನನಗೆ ಮನಸು ತುಂಬಿ ಬಂತು. ದೇವೇಂದ್ರ ಫಡ್ನವೀಸ್‌ರ ಹೃದಯವಂತಿಕೆಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಶಿವಸೇನೆ ನಾಯಕ ಏಕನಾಥ ಶಿಂಧೆ ಹೇಳಿದ್ದಾರೆ. “ಉದ್ಧವ್ ಠಾಕ್ರೆಯವರು ಮುಖ್ಯಮಂತ್ರಿಯಾಗಿದ್ದಾಗ ಶಿವಸೇನೆ ಶಾಸಕರ ಕ್ಷೇತ್ರಗಳೇ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಅಲ್ಲಿನ್ನೂ ಅಭಿವೃದ್ಧಿ ಕೆಲಸಗಳು ಬಾಕಿ ಇವೆ. ಅದನ್ನೆಲ್ಲ ಪೂರ್ಣಗೊಳಿಸುವ ಮತ್ತು ಹಿಂದುತ್ವ ಸಿದ್ಧಾಂತ -ಬಾಳಾ ಸಾಹೇಬ್ ಠಾಕ್ರೆಯವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ನಾವು ಜಂಟಿಯಾಗಿ ಕುಳಿತು ಮುಖ್ಯಮಂತ್ರಿ ಹುದ್ದೆ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದೇವೆ” ಎಂದೂ ತಿಳಿಸಿದ್ದಾರೆ.
ಉದ್ಧವ್ ಠಾಕ್ರೆ ಮತ್ತು ಮಹಾ ವಿಕಾಸ್ ಅಘಾಡಿ ಮೈತ್ರಿ ವಿರುದ್ಧ ಮುನಿಸಿಕೊಂಡು ಕಳೆದ ೧೦ ದಿನಗಳಿಂದಲೂ ರಾಜ್ಯವನ್ನೇ ಬಿಟ್ಟಿದ್ದ ಏಕನಾಥ ಶಿಂಧೆ ಇಂದು ಬೆಳಗ್ಗೆಯಷ್ಟೇ ಮುಂಬಯಿಗೆ ಬಂದು ದೇವೇಂದ್ರ ಫಡ್ನವೀಸ್‌ರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದರು. ಶಿವಸೇನೆಯಲ್ಲಿ ಬಂಡಾಯ ಶುರುವಾದಾಗಿನಿಂದಲೂ ಇದು ಬಿಜೆಪಿಯದ್ದೇ ಕೆಲಸ. ತಾನು ಅಧಿಕಾರ ಹಿಡಿಯಬೇಕೆಂಬ ಕಾರಣಕ್ಕೆ ಶಿವಸೇನೆ ಶಾಸಕರ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸುತ್ತಿದೆ ಎಂದೇ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿತ್ತು. ಆದರೆ ಬಿಜೆಪಿ ಸಿಎಂ ಹುದ್ದೆಯನ್ನೂ ಬಿಟ್ಟಿದ್ದಲ್ಲದೆ, ಇದು ಬಿಜೆಪಿ ಸರ್ಕಾರವಲ್ಲ, ಶಿಂಧೆ ಸರ್ಕಾರ ಎಂದು ಘೋಷಿಸುವ ಮೂಲಕ ಅಚ್ಚರಿಯ ಹೆಜ್ಜೆಯನ್ನಿಟ್ಟಿದೆ.
ಇದನ್ನೂ ಓದಿ: Maha politics: ಅಸ್ವಾಭಾವಿಕ ಮೈತ್ರಿ ಸರಕಾರಕ್ಕೆ ಉಳಿಗಾಲವಿಲ್ಲ, ಕರ್ನಾಟಕದ ಬಳಿಕ ಈಗ ಮಹಾರಾಷ್ಟ್ರ ಮಾದರಿ!