ಮುಂಬೈ: ರಾಜಕಾರಣಿಗಳಿಗೆ ಸರ್ಕಾರದ ಯಾವುದೇ ಖಜಾನೆಯಲ್ಲಿ, ಯಾವುದೇ ಇಲಾಖೆಯಲ್ಲಿ ಹಣ ಇರಲಿ, ಅದನ್ನು ಲಪಟಾಯಿಸದೆ ಬಿಡುವುದಿಲ್ಲ. ಇದಕ್ಕೆ ನಿದರ್ಶನ ಎಂಬಂತೆ ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಸಂಪುಟದ ಸಚಿವರು, ನಿರ್ಭಯಾ ನಿಧಿಯ ೩೦ ಕೋಟಿ ರೂಪಾಯಿಯನ್ನೇ ದುರ್ಬಳಕೆ (Nirbhaya Fund Misuse) ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದಾಗಿ ತೀವ್ರ ಜನಾಕ್ರೋಶ ವ್ಯಕ್ತವಾಗಿದೆ.
ಮಹಿಳೆಯ ಮೇಲೆ ನಡೆಯುವ ದೌರ್ಜನ್ಯ, ಅಪರಾಧಗಳನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ನಿರ್ಭಯಾ ನಿಧಿಯನ್ನು ಸ್ಥಾಪಿಸಿದ್ದು, ಕೋಟ್ಯಂತರ ರೂ. ಹಣ ವಿನಿಯೋಗಿಸಲಾಗುತ್ತದೆ. ಇದೇ ನಿಧಿಯ ಕೋಟ್ಯಂತರ ರೂಪಾಯಿಯನ್ನು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಸಚಿವರು ಹಾಗೂ ಶಾಸಕರು ವೈ ಪ್ಲಸ್ ಸೆಕ್ಯುರಿಟಿ ಹಾಗೂ ಐಷಾರಾಮಿ ಕಾರುಗಳ ಖರೀದಿಗಾಗಿ ಬಳಸಿದ್ದಾರೆ ಎನ್ನಲಾಗಿದೆ.
೨೨೦ ಬೊಲೇರೊ, ೩೩ ಎರ್ಟಿಗಾ ಕಾರು ಖರೀದಿ
ಕೇಂದ್ರ ಸರ್ಕಾರ ಮಹಾರಾಷ್ಟ್ರಕ್ಕೆ ನೀಡಿದ ನಿರ್ಭಯಾ ನಿಧಿಯ ಹಣದಲ್ಲಿ ಶಿವಸೇನೆ ಸಚಿವರು ಹಾಗೂ ಶಾಸಕರು ವೈ ಪ್ಲಸ್ ಸೆಕ್ಯುರಿಟಿಗೆ ವಿನಿಯೋಗಿಸುವ ಜತೆಗೆ, ೨೨೦ ಬೊಲೇರೊ, ೩೩ ಎರ್ಟಿಗಾ ಕಾರು, ೩೧೩ ಪಲ್ಸರ್ ಬೈಕ್‌ಗಳು, ೨೦೦ ಸ್ಕೂಟಿಗಳನ್ನು ಖರೀದಿಸಲು ನೀಡಲಾಗಿದೆ. ಇದಕ್ಕಾಗಿ ೩೦ ಕೋಟಿ ರೂ. ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ ಎಂದು ತಿಳಿದುಬಂದಿದೆ. ಇದರ ಕುರಿತು ತನಿಖೆಯಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಏನಿದು ನಿರ್ಭಯಾ ನಿಧಿ?
೨೦೧೨ರಲ್ಲಿ ದೆಹಲಿಯಲ್ಲಿ ನಿರ್ಭಯಾ ಎಂಬ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು ವಿಶ್ವಾದ್ಯಂತ ಸುದ್ದಿಯಾಗಿತ್ತು. ಕ್ರೂರವಾಗಿ ಯುವತಿಯನ್ನು ಹತ್ಯೆಗೈದಿದ್ದ ಪ್ರಕರಣದ ಕುರಿತು ಟೀಕೆಗಳು ವ್ಯಕ್ತವಾಗಿದ್ದವು. ಆಗ ಕೇಂದ್ರ ಸರ್ಕಾರವು, ಹೆಣ್ಣುಮಕ್ಕಳ ಮೇಲಿನ ಅಪರಾಧ, ದೌರ್ಜನ್ಯ ತಡೆಯಲು ನಿರ್ಭಯಾ ನಿಧಿ ಸ್ಥಾಪಿಸಿ ಒಂದು ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಇದೇ ನಿಧಿಯ ಹಣವನ್ನು ಆಯಾ ರಾಜ್ಯಗಳಿಗೆ ನಿಯಮಿತವಾಗಿ ನೀಡಲಾಗುತ್ತದೆ. ಆದರೆ, ರಾಜಕಾರಣಿಗಳು ಈ ಹಣವನ್ನೂ ಬಿಡುವುದಿಲ್ಲ ಎಂಬುದು ಜನಾಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ | KIADB Scam | ಧಾರವಾಡ ಕೆಐಎಡಿಬಿ ಅಕ್ರಮ ಪ್ರಕರಣದ ತನಿಖೆ ಶುರು; ಭೂಸ್ವಾಧೀನಕ್ಕೆ 2 ಬಾರಿ ಪರಿಹಾರ ಪಡೆದ ಆರೋಪ