ಅಹಮದಾಬಾದ್: ಕರ್ನಾಟಕ ಸೇರಿ ದೇಶದ ಹಲವು ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಯ (Lok Sabha Election 2024) ಮೂರನೇ ಹಂತದ ಮತದಾನವು ಭರದಿಂದ ಸಿಗುತ್ತಿದೆ. ದೇಶದ ಜನ ಬಿಸಿಲನ್ನೂ ಲೆಕ್ಕಿಸದೆ ಮತದಾನ ಮಾಡುತ್ತಿದ್ದಾರೆ. ಮಧ್ಯಾಹ್ನ 1 ಗಂಟೆ ವೇಳೆಗೆ ಶೇ.41ರಷ್ಟು ಮತದಾನ ದಾಖಲಾಗಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ. ಇನ್ನು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗುಜರಾತ್‌ನ ಅಹಮದಾಬಾದ್‌ನಲ್ಲಿ ಮತದಾನ ಮಾಡಿದರು. ಮತದಾನದ ಬಳಿಕ ಜನರತ್ತ ತೆರಳಿದ ಮೋದಿ ಅವರ ಜತೆ ಮಾತುಕತೆ ನಡೆಸಿದರು. ಇದೇ ವೇಳೆ, ಅಜ್ಜಿಯೊಬ್ಬರು ಮೋದಿ ಅವರಿಗೆ ರಾಖಿ ಕಟ್ಟಿದರು. ಈ ವಿಡಿಯೊ (Viral Video) ಈಗ ಭಾರಿ ವೈರಲ್ ಆಗಿದೆ.
ಕುರ್ತಾ-ಪೈಜಾಮ ಜತೆಗೆ ಕೇಸರಿ ಬಣ್ಣದ ಜಾಕೆಟ್ ಧರಿಸಿದ್ದ ಅವರು ತಮ್ಮತ್ತ ಕೈ ಬೀಸುತ್ತಿದ್ದ ಜನರ ಬಳಿ ತೆರಳಿದರು. ಮಹಿಳೆಯರು, ಮಕ್ಕಳು ಸೇರಿ ನೂರಾರು ಜನ ಅವರನ್ನು ನೋಡಲು ಕಾಯುತ್ತಿದ್ದರು. ಜನರ ಬಳಿ ಹೋದ ಮೋದಿ, ಅಲ್ಲಿ ಮಹಿಳೆಯೊಬ್ಬರ ಬಳಿಯಿಂದ ಮಗುವನ್ನು ಎತ್ತಿಕೊಂಡ ಮೋದಿ ಅದನ್ನು ಮುದ್ದಾಡಿದರು. ಇದಾದ ಬಳಿಕ ಮಹಿಳೆಯೊಬ್ಬರು ಮೋದಿಗೆ ಸಹೋದರತ್ವದ ಸಂಕೇತವಾಗಿ ರಾಖಿ ಕಟ್ಟಿದರು. ಜನರ ಜತೆ ಮಾತುಕತೆ ನಡೆಸಿದ ಬಳಿಕ ಮೋದಿ ಅವರು ಕೈ ಬೀಸುತ್ತ, ಮತದಾನ ಮಾಡಿದ್ದೇನೆ ಎಂಬುದರ ಸಂಕೇತವಾಗಿ ಬೆರಳು ತೋರಿಸುತ್ತ ಅಲ್ಲಿಂದ ತೆರಳಿದರು.
#WATCH | An elderly woman ties rakhi to PM Modi as he greets people after casting his vote for #LokSabhaElections2024 at a polling booth in Ahmedabad, Gujarat pic.twitter.com/pGKPQhQiQd
— ANI (@ANI) May 7, 2024
ಮತದಾನ ಕೇಂದ್ರದ ಬಳಿಗೆ ಪ್ರಧಾನಿ ಸುಮಾರು 7.30ರ ಹೊತ್ತಿಗೆ ಆಗಮಿಸಿದ್ದರು. ಅಮಿತ್ ಶಾ ಪ್ರಧಾನಿಯನ್ನು ಸ್ವಾಗತಿಸಿದರು. ಬಳಿಕ ಇಬ್ಬರು ನಾಯಕರು ಸುತ್ತ ನೆರೆದಿದ್ದ ಸಾವರ್ಜನಿಕರತ್ತ ಕೈ ಬೀಸುತ್ತ ಮತಗಟ್ಟೆಗೆ ತೆರಳಿದರು. ರಸ್ತೆಯುದ್ದಕ್ಕೂ ನಿಂತಿದ್ದ ಜನರು ಮೋದಿ ಪರ ಘೋಷಣೆ ಕೂಗಿದರು. ಈ ಮಧ್ಯೆ ಅಭಿಮಾನಿಗಳಿಗೆ ಮೋದಿ ಆಟೋಗ್ರಾಫ್ ನೀಡುವುದನ್ನೂ ಮರೆಯಲಿಲ್ಲ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮೋದಿ ಅವರು, ಈ ಮೂರನೇ ಹಂತದಲ್ಲಿ ಎಲ್ಲರೂ ಹಕ್ಕು ಚಲಾಯಿಸುವ ಮೂಲಕ ದಾಖಲೆ ಪ್ರಮಾಣದ ಮತದಾನಕ್ಕೆ ಕಾರಣವಾಗಬೇಕು ಎಂದು ಕರೆ ನೀಡಿದ್ದಾರೆ. ʼʼಚುನಾವಣೆಯ ಇಂದಿನ ಹಂತದಲ್ಲಿ ಮತದಾನ ಮಾಡುವ ಎಲ್ಲರೂ ದಾಖಲೆ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಬೇಕೆಂದು ಮನವಿ ಮಾಡುತ್ತೇನೆ. ಮತದಾರರ ಸಕ್ರಿಯ ಭಾಗವಹಿಸುವಿಕೆಯು ಖಂಡಿತವಾಗಿ ಚುನಾವಣೆಯನ್ನು ಮತ್ತಷ್ಟು ರೋಮಾಂಚಕಗೊಳಿಸುತ್ತದೆ” ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Narendra Modi: “ನಾನು ಇಸ್ಲಾಂ ವಿರೋಧಿ ಅಲ್ಲ, ಆದರೆ ಮುಸ್ಲಿಮರು…”; ಕಾಂಗ್ರೆಸ್ ಆರೋಪದ ಬಗ್ಗೆ ಮೋದಿ ಹೇಳಿದ್ದೇನು?