ನವದೆಹಲಿ: ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ದೇಣಿಗೆ ನೀಡಬಹುದಾದ ಚುನಾವಣಾ ಬಾಂಡ್ ಯೋಜನೆಯು (Electoral Bonds) ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ (Supreme Court) ಮಹತ್ವದ ತೀರ್ಪು ನೀಡಿದ್ದು, ಇದರಿಂದ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿದೆ. ಸಂವಿಧಾನ ನೀಡಿರುವ ಮಾಹಿತಿ ಹಕ್ಕು ಕಾಯ್ದೆಯ ಉಲ್ಲಂಘನೆಯಾಗುವುದರಿಂದ ಚುನಾವಣಾ ಬಾಂಡ್ ಯೋಜನೆಯು ಅಸಾಂವಿಧಾನಿಕವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ಪಂಚ ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ತೀರ್ಪು ನೀಡಿದೆ. ಇನ್ನು 2016ರಿಂದ 2022ರ ಅವಧಿಯಲ್ಲಿ ದೇಶದ ರಾಜಕೀಯ ಪಕ್ಷಗಳು (Political Parties) ಚುನಾವಣಾ ಬಾಂಡ್ ಮೂಲಕ 16 ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ಹಣ ಸಂಗ್ರಹಿಸಿವೆ ಎಂದು ಚುನಾವಣಾ ಆಯೋಗದ ಮಾಹಿತಿಯಿಂದ ತಿಳಿದುಬಂದಿದೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, 2016ರಿಂದ 2022ರ ಅವಧಿಯಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳು 16,437 ಕೋಟಿ ರೂ. ಸಂಗ್ರಹಿಸಿವೆ. 28,030 ಬಾಂಡ್‌ಗಳ ಮೂಲಕ ಇಷ್ಟು ಮೊತ್ತ ಸಂಗ್ರಹವಾಗಿದ್ದು, ಬಿಜೆಪಿಯೇ ಅತಿ ಹೆಚ್ಚು ದೇಣಿಗೆ ಸಂಗ್ರಹಿಸಿದೆ. ಒಟ್ಟು ಸಂಗ್ರಹವಾದ ಮೊತ್ತದಲ್ಲಿ ಬಿಜೆಪಿಯು ಶೇ.60ರಷ್ಟು ದೇಣಿಗೆಯನ್ನು ಸಂಗ್ರಹಿಸಿದೆ. ನಂತರದ ಸ್ಥಾನದಲ್ಲಿ ಕಾಂಗ್ರೆಸ್, ಟಿಎಂಸಿ, ಸಿಪಿಎಂ, ಎನ್‌ಸಿಪಿ ಹಾಗೂ ಬಿಎಸ್‌ಪಿ ಇವೆ. ಅಷ್ಟೇ ಅಲ್ಲ, ಬಿಜೆಪಿಯು ಎಲ್ಲ 30 ಪಕ್ಷಗಳಿಗಿಂತ ಮೂರು ಪಟ್ಟು ಹೆಚ್ಚು ದೇಣಿಗೆ ಸಂಗ್ರಹಿಸಿದೆ ಎಂದು ಚುನಾವಣಾ ಆಯೋಗದ ಮಾಹಿತಿಯಿಂದ ತಿಳಿದುಬಂದಿದೆ.
ಪಕ್ಷ | ದೇಣಿಗೆ |
ಬಿಜೆಪಿ | 10,122 ಕೋಟಿ ರೂ. |
ಕಾಂಗ್ರೆಸ್ | 1,547 ಕೋಟಿ ರೂ. |
ಟಿಎಂಸಿ | 823 ಕೋಟಿ ರೂ. |
ಸಿಪಿಐ (ಎಂ) | 367 ಕೋಟಿ ರೂ. |
ಎನ್‌ಸಿಪಿ | 231 ಕೋಟಿ ರೂ. |
ಬಿಎಸ್‌ಪಿ | 85 ಕೋಟಿ ರೂ. |
ಸಿಪಿಐ | 13 ಕೋಟಿ ರೂ. |
ಸುಪ್ರೀಂ ಕೋರ್ಟ್ ಹೇಳಿದ್ದೇನು?
“ಚುನಾವಣಾ ಬಾಂಡ್ ಯೋಜನೆಯು ಸಂವಿಧಾನದ 19 (1) (A) ವಿಧಿ ಅಡಿಯಲ್ಲಿ ನೀಡಲಾದ ಮಾಹಿತಿ ಹಕ್ಕು ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಇದರಿಂದ ಕೊಡು-ಕೊಳ್ಳುವ ವ್ಯವಹಾರಕ್ಕೆ ( ಉದಾಹರಣೆ: ನೀನೊಂದು ಸಹಾಯ ಮಾಡಿದರೆ, ಅದಕ್ಕೆ ಬದಲಾಗಿ ಬೇರೆ ರೀತಿಯಲ್ಲಿ ನಾನು ಸಹಾಯ ಮಾಡುವುದು) ಪುಷ್ಟಿ ನೀಡುತ್ತದೆ. ಹಾಗೆಯೇ, ಕಂಪನಿಗಳ ಕಾಯ್ದೆಗೆ ತಿದ್ದುಪಡಿ ತಂದಿರುವುದು ಅಸಾಂವಿಧಾನಿಕವಾಗಿದೆ. ರಾಜಕೀಯ ಪಕ್ಷಗಳು ಪಡೆಯುವ ದೇಣಿಗೆಯ ಮೂಲ ತಿಳಿಯುವ ಹಕ್ಕು ದೇಶದ ನಾಗರಿಕರಿಗೆ ಇದೆ” ಎಂದು ನ್ಯಾಯಾಲಯ ತಿಳಿಸಿತು.
SC strikes down Electoral Bonds scheme as violative of RTI and Article 19(1)(a)
— ANI Digital (@ani_digital) February 15, 2024
Read @ANI Story | https://t.co/R0fpUc7Oas #ElectoralBonds #SupremeCourt #RTI pic.twitter.com/0p9hzWhjBm
ಚುನಾವಣಾ ಬಾಂಡ್ ಯೋಜನೆಯನ್ನು 2017ರಲ್ಲಿ ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬಜೆಟ್ ಅಧಿವೇಶನದಲ್ಲಿ ಮೊದಲು ಪ್ರಸ್ತಾಪಿಸಿದರು. ಹಣಕಾಸು ಕಾಯ್ದೆ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಗಳಿಗೆ ತಿದ್ದುಪಡಿ ತಂದು 2018ರ ಜನವರಿಯಲ್ಲಿ ಚುನಾವಣಾ ಬಾಂಡ್ ಯೋಜನೆ ಜಾರಿ ಕುರಿತು ಅಧಿಸೂಚನೆ ಹೊರಡಿಸಲಾಯಿತು. ಆ ಮೂಲಕ ಚುನಾವಣಾ ಬಾಂಡ್ ಯೋಜನೆ ಜಾರಿಗೊಳಿಸಲಾಯಿತು.
ಇದನ್ನೂ ಓದಿ: Electoral Bonds: ಚುನಾವಣೆ ಬಾಂಡ್; ಸುಪ್ರೀಂ ತೀರ್ಪಿನಿಂದ ಆಗೋ ಬದಲಾವಣೆ ಏನು?
ಚುನಾವಣಾ ಬಾಂಡ್ ಯೋಜನೆ ಅಡಿಯಲ್ಲಿ ಭಾರತದ ನಾಗರಿಕ ಅಥವಾ ಭಾರತದಲ್ಲಿ ನೋಂದಣಿಯಾದ ಕಂಪನಿಯು ಯಾವುದೇ ರಾಜಕೀಯ ಪಕ್ಷಕ್ಕೆ ಚುನಾವಣೆ ಬಾಂಡ್‌ಗಳನ್ನು ಖರೀದಿಸುವ ಮೂಲಕ ದೇಣಿಗೆ ನೀಡಬಹುದಾಗಿದೆ. ಭಾರತೀಯ ಸ್ಟೇಟ್ ಬ್ಯಾಂಕ್‌ನ (SBI) ಆಯ್ದ ಶಾಖೆಗಳಲ್ಲಿ 1 ಸಾವಿರ, 10 ಸಾವಿರ, ಲಕ್ಷ, 10 ಲಕ್ಷ ಹಾಗೂ 1 ಕೋಟಿ ರೂ.ವರೆಗೆ ಚುನಾವಣೆ ಬಾಂಡ್ ಖರೀದಿಸಿ ದೇಣಿಗೆ ನೀಡಬಹುದಾಗಿದೆ. ಇಲ್ಲಿ ದೇಣಿಗೆ ನೀಡಿದವರ ಕುರಿತು ಯಾವುದೇ ಮಾಹಿತಿ ಬಹಿರಂಗವಾಗುವುದಿಲ್ಲ. ಹಾಗೆಯೇ, ಇಷ್ಟು ಮೊತ್ತದ ದೇಣಿಗೆಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಹಾಗಾಗಿ ಇದು ವಿವಾದಕ್ಕೆ ಗುರಿಯಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ