ನವದೆಹಲಿ: 17 ವರ್ಷ ದಾಟಿದವರೂ ಕೂಡ ಮತದಾರರ ಪಟ್ಟಿಗೆ (First Time Voters) ಹೆಸರು ನೋಂದಾಯಿಸಿಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಈ ಕುರಿತು ಕೇಂದ್ರ ಕಾನೂನು ಹಾಗೂ ನ್ಯಾಯ ಸಚಿವಾಲಯವು ಪ್ರಕಟಣೆ ಹೊರಡಿಸಿದ್ದು, 17 ವರ್ಷ ದಾಟಿದ ತರುಣರು ಪ್ರತಿ ವರ್ಷದ ಜನವರಿ, ಏಪ್ರಿಲ್, ಜುಲೈ ಅಥವಾ ಅಕ್ಟೋಬರ್‌ನಲ್ಲಿ ಮತದಾರರ ಪಟ್ಟಿಗೆ ನೋಂದಣಿ ಮಾಡಿಕೊಳ್ಳಬಹುದು. ಇದಕ್ಕಾಗಿ ಸರ್ಕಾರ ಸಕಲ ಸಿದ್ಧತೆ ನಡೆಸಿದೆ ಎಂದು ತಿಳಿಸಿದೆ.
ಮುಂದಿನ ವರ್ಷದ ಜನವರಿ 1 ಅಥವಾ ಅದಕ್ಕಿಂತ ಮೊದಲು 18 ವರ್ಷ ಪೂರೈಸಿದವರು ಜನವರಿ 1ರಂದು ನೋಂದಣಿ ಮಾಡಿಕೊಳ್ಳದಿದ್ದರೆ ಅವರು ನೋಂದಣಿ ಮಾಡಿಕೊಳ್ಳಲು ಒಂದು ವರ್ಷ ಕಾಯಬೇಕಿತ್ತು. ಇದನ್ನು ತಪ್ಪಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರವು ಪ್ರತಿ ವರ್ಷ ಜನವರಿ1, ಏಪ್ರಿಲ್ 1, ಜುಲೈ 1 ಹಾಗೂ ಅಕ್ಟೋಬರ್ 1ರಂದು ನೋಂದಣಿಗೆ ಅವಕಾಶ ಕಲ್ಪಿಸಿದೆ. ಇದರಿಂದ 18 ವರ್ಷ ತುಂಬುತ್ತಲೇ ಮತದಾನ ಮಾಡಲು ನೆರವಾಗಲಿದೆ.
ನೋಂದಣಿ ಮಾಡಿಕೊಳ್ಳುವುದು ಹೇಗೆ?
17 ವರ್ಷ ತುಂಬಿದವರು ಆನ್‌ಲೈನ್ ಮೂಲಕ ಮತದಾರರ ಪಟ್ಟಿಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ನ್ಯಾಷನಲ್ ವೋಟರ್ಸ್ ಸರ್ವಿಸ್ ಪೋರ್ಟಲ್ (National Voters’ Service Portal)ಗೆ ಭೇಟಿ ನೀಡಿ ಫಾರ್ಮ್ 6ಅನ್ನು ತುಂಬುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಬಳಿಕ ಚುನಾವಣೆ ಆಯೋಗವು ಎಲೆಕ್ಟೋರಲ್ ಫೋಟೊ ಐಡೆಂಟಿಟಿ ಕಾರ್ಡ್ (Electoral Photo Identity Card-EPIC) ನೀಡಲಿದೆ. 18 ವರ್ಷ ತುಂಬಿದ ಬಳಿಕ ಮತದಾರರ ಗುರುತಿನ ಚೀಟಿ ಸಿಗಲಿದೆ.
ಇದನ್ನೂ ಓದಿ | ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಕಡ್ಡಾಯವಲ್ಲ: ರಾಜ್ಯ ಚುನಾವಣಾ ಆಯೋಗ ಸ್ಪಷ್ಟನೆ