ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ವಿರುದ್ಧ ಸತ್ಯಕ್ಕೆ ದೂರವಾದ ಮತ್ತು ದೃಢೀಕೃತವಲ್ಲದ ಹೇಳಿಕೆಯನ್ನು ನೀಡಿದ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Congress General Secretary Priyanka Gandhi Vadra) ಅವರಿಗೆ ಕೇಂದ್ರ ಚುನಾವಣಾ ಆಯೋಗವು (election commission) ಕಾರಣ ಕೇಳಿ ನೋಟಿಸ್ (Show cause Notice) ಜಾರಿ ಮಾಡಿದೆ. ಈ ಸಂಬಂಧ ಭಾರತೀಯ ಜನತಾ ಪಾರ್ಟಿ (BJP Party) ನಾಯಕರಾದ ಹರ್ದೀಪ್ ಸಿಂಗ್ ಪುರಿ ಮತ್ತು ಅನಿಲ್ ಬಲುನಿ, ಓಂ ಪಾಠಕ್ ಅವರು ಚುನಾಣಾ ಆಯೋಗಕ್ಕೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಆಯೋಗವು ಪ್ರಿಯಾಂಕಾ ಅವರಿಗೆ ನೋಟಿಸ್ ಜಾರಿ ಮಾಡಿದೆ.
ನರೇಂದ್ರ ಮೋದಿ ಸರ್ಕಾರವು ಸಾರ್ವಜನಿಕ ವಲಯದ ಉದ್ಯಮಗಳನ್ನು (ಪಿಎಸ್‌ಯು) ಖಾಸಗೀಕರಣಗೊಳಿಸಿದೆ ಎಂದು ಪ್ರಿಯಾಂಕಾ ಗಾಂಧಿ ಅವರು “ಆಧಾರರಹಿತ ಮತ್ತು ಸುಳ್ಳು” ಹೇಳಿಕೆಯನ್ನು ನೀಡಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿಯ ನಾಯಕರು ಆರೋಪಿಸಿದ್ದಾರೆ.
ಮಧ್ಯಪ್ರದೇಶದ ಸಾನ್ವೆರ್ ಅಸೆಂಬ್ಲಿ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ರ್ಯಾಲಿಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ವಲಯದ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (BHEL) ಅನ್ನು “ತಮ್ಮ ಕೈಗಾರಿಕೋದ್ಯಮಿ ಸ್ನೇಹಿತರಿಗೆ” ನೀಡಿದ್ದಾರೆ ಎಂದು ಆರೋಪಿಸಿದ್ದರು.
ಮಧ್ಯಪ್ರದೇಶದ ಸಾನ್ವೆರ್ ಅಸೆಂಬ್ಲಿ ಕ್ಷೇತ್ರದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡುವಾಗ, ನೀವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಬಂಧಿಸಿದಂತೆ ಪರಿಶೀಲಿಸದ ಮತ್ತು ಸುಳ್ಳು ಹೇಳಿಕೆಗಳನ್ನು ನೀಡಿದ್ದೀರಿ. ಈ ಹೇಳಿಕೆಗಳು ಸಾರ್ವಜನಿಕರನ್ನು ದಾರಿ ತಪ್ಪಿಸುವ ಮತ್ತು ಪ್ರಧಾನಿಯವರ ಪ್ರತಿಷ್ಠೆಗೆ ಕಳಂಕ ತರುವಂತಾಗಿದೆ ಎಂದು ಆರೋಪಿಸಲಾಗಿದೆ ಎಂದು ನೋಟಿಸ್‌ನಲ್ಲಿ ಚುನಾವಣಾ ಆಯೋಗವು ತಿಳಿಸಿದೆ. ಈ ನೋಟಿಸ್‌ಗೆ ಗುರುವಾ ರಾತ್ರಿ 8 ಗಂಟೆಯೊಳಗೇ ಉತ್ತರಿಸುವಂತೆ ಚುನಾವಣಾ ಸಮಿತಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಸೂಚಿಸಿದೆ.
ಮೋದಿ-ಅದಾನಿ ನಂಟು ಆಪ್ ಪೋಸ್ಟ್! ಕೇಜ್ರಿವಾಲ್‌ಗೆ ನೋಟಿಸ್
ಸೋಷಿಯಲ್ ಮೀಡಿಯಾಗಳಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ವಿರುದ್ಧ ಅವಮಾನಕಾರಿ ಹಾಗೂ ಅಗೌರವ ತೋರುವ (insulting and defamatory remark) ಪೋಸ್ಟ್ ಮಾಡಿದ ಆಮ್ ಆದ್ಮಿ ಪಾರ್ಟಿ(AAP)ಗೆ ಕೇಂದ್ರ ಚುನಾವಣಾ ಆಯೋಗವು (Election Commission) ನೋಟಿಸ್ ಜಾರಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಗೊಳಿಸುವ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳ ಕುರಿತು ಭಾರತೀಯ ಜನತಾ ಪಾರ್ಟಿ(BJP)ಯು ದೂರು ನೀಡಿದೆ ಎಂದು ಚುನಾವಣಾ ಸಮಿತಿ ತಿಳಿಸಿದೆ. ಎಕ್ಸ್ ವೇದಿಕೆಯಲ್ಲಿ ಮಾಡಲಾದ ಪೋಸ್ಟುಗಳಲ್ಲಿ ಪ್ರಧಾನಿ ಮೋದಿ ಅವರನ್ನು ಅವಹೇಳನಕಾರಿಯಾಗಿ, ಅವಮಾನಕರವಾಗಿ ಮತ್ತು ಮಾನಹಾನಿಕರವಾಗಿ ಚಿತ್ರಿಸಲಾಗಿದೆ ಎಂದು ಭಾರತೀಯ ಜನತಾ ಪಾರ್ಟಿಯು ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.
ಪ್ರಧಾನಿ ನರೇಂದ್ರ ಮೋದಿ ಮತ್ತು ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರ ನಡುವೆ ಸಂಪರ್ಕವಿದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಚುನಾವಣಾ ಸಮಿತಿ ಉಲ್ಲೇಖಿಸಿದೆ.
ಚುನಾವಣಾ ಪ್ರಚಾರದಲ್ಲಿ ಘನತೆಯನ್ನು ಕಾಪಾಡಿಕೊಳ್ಳಲು, ಸಭ್ಯತೆಯ ಮಿತಿಗಳನ್ನು ಮೀರದಂತೆ ಮತ್ತು ರಾಜಕೀಯ ಪ್ರತಿಸ್ಪರ್ಧಿಗಳ ವೈಯಕ್ತಿಕ ವ್ಯಕ್ತಿತ್ವ ಮತ್ತು ನಡವಳಿಕೆಯ ಮೇಲಿನ ದಾಳಿಯಿಂದ ದೂರವಿರಲು ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಪದೇ ಪದೇ ಸಲಹೆಗಳನ್ನು ನೀಡಲಾಗುತ್ತಿದೆ ಎಂದು ಚುನಾವಣಾ ಆಯೋಗವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಸ್ತುತ ಹೇಳಲಾದ ವಿಷಯವನ್ನು ಆಮ್ ಆದ್ಮಿ ಪಕ್ಷದ ಹ್ಯಾಂಡಲ್‌ನಿಂದ ಪೋಸ್ಟ್ ಮಾಡಲಾಗಿದೆ ಎಂದು ಕಂಡುಬಂದಿದೆ. ಇದು ರಾಷ್ಟ್ರೀಯ ಪಕ್ಷವಾಗಿರುವುದರಿಂದ ಸಾರ್ವಜನಿಕವಾಗಿ ಅಂತಹ ವಿಷಯವನ್ನು ಪ್ರಕಟಿಸುವ ಮತ್ತು ಪ್ರಸಾರ ಮಾಡುವ ಮೊದಲು ಸತ್ಯಗಳ ಪರಿಶೀಲನೆಯ ಮೂಲಕ ಎಚ್ಚರಿಕೆ ವಹಿಸಬೇಕು ಎಂದು ಚುನಾವಣಾ ಸಮಿತಿ ಹೇಳಿದೆ.
ರಾಷ್ಟ್ರೀಯ ಪಕ್ಷವೊಂದರ ಸ್ಟಾರ್ ಪ್ರಚಾರಕರಾಗಿರುವ ಪ್ರಧಾನಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಪೋಸ್ಟ್‌ಗಳ ಬಗ್ಗೆ ನವೆಂಬರ್ 16ರೊಳಗೆ ವಿವರಣೆ ನೀಡುವಂತೆ ಆಮ್ ಆದ್ಮಿ ಪಾರ್ಟಿ ಸಂಚಾಲಕರೂ ಆಗಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಚುನಾವಣಾ ಆಯೋಗ ಸೂಚಿಸಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ಸೂಕ್ತ ಕ್ರಮವನ್ನು ಏಕೆ ತೆಗೆದುಕೊಳ್ಳಬಾರದು ಎಂದು ಚುನಾವಣಾ ಆಯೋಗಕ್ಕೆ ವಿವರಿಸುವಂತೆಯೂ ಕೇಜ್ರಿವಾಲ್ ಅವರಿಗೆ ಸೂಚಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Assembly Election 2023: ಅಸ್ಸಾಂ ಸಿಎಂ ಶರ್ಮಾ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾಗೆ ಚುನಾವಣಾ ಆಯೋಗ ನೋಟಿಸ್