Site icon Vistara News

ಲೋಕಸಭೆ ಚುನಾವಣೆ ದಿನಾಂಕ ಘೋಷಣೆ; 7 ಹಂತದಲ್ಲಿ ಎಲೆಕ್ಷನ್, ಏಪ್ರಿಲ್‌ 19ರಿಂದ ಮತದಾನ, ರಿಸಲ್ಟ್‌ ಯಾವಾಗ?

Lok Sabha Election 2024 Date

Election Commission Of India Announces Lok Sabha Election 2024 Dates

ನವದೆಹಲಿ: ದೇಶದ ಜನರು ಕುತೂಹಲದಿಂದ ಕಾಯುತ್ತಿರುವ ಲೋಕಸಭೆ ಚುನಾವಣೆಯ (Lok Sabha Election 2024) ದಿನಾಂಕವನ್ನು ಚುನಾವಣಾ ಆಯೋಗವು (Election Commission Of India) ಘೋಷಣೆ ಮಾಡಿದೆ. ಈ ಬಾರಿಯೂ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಅವರು ದಿನಾಂಕವನ್ನು ಘೋಷಿಸಿದರು. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ. ಮೊದಲ ಹಂತದ ಮತದಾನವು ಏಪ್ರಿಲ್‌ 19ರಿಂದ ಆರಂಭವಾಗಲಿದೆ. ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್ 1ರಂದು ಚುನಾವಣೆ ಮುಗಿಯಲಿದೆ.

ಹೀಗಿದೆ 7 ಹಂತಗಳಲ್ಲಿ ಚುನಾವಣೆ ದಿನಾಂಕ

ಮೊದಲ ಹಂತ: ಏಪ್ರಿಲ್‌ 19102 ಕ್ಷೇತ್ರಗಳು

2ನೇ ಹಂತ: ಏಪ್ರಿಲ್‌ 2689 ಕ್ಷೇತ್ರಗಳು

3ನೇ ಹಂತ: ಮೇ 794 ಕ್ಷೇತ್ರಗಳು

4ನೇ ಹಂತ: ಮೇ 1396 ಕ್ಷೇತ್ರಗಳು

5ನೇ ಹಂತ: ಮೇ 2049 ಕ್ಷೇತ್ರಗಳು

6ನೇ ಹಂತ: ಮೇ 2557 ಕ್ಷೇತ್ರಗಳು

7ನೇ ಹಂತ: ಜೂನ್‌ 157 ಕ್ಷೇತ್ರಗಳು

ನಾಲ್ಕು ರಾಜ್ಯಗಳಲ್ಲಿ ಚುನಾವಣೆ

ಆಂಧ್ರಪ್ರದೇಶದಲ್ಲಿ ಮೇ 13ರಂದು ಮತದಾನ ನಡೆಯಲಿದೆ. ಒಡಿಶಾದಲ್ಲಿ ಮೇ 13 ಹಾಗೂ 20ರಂದು ಎರಡು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಲಿದೆ. ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶದಲ್ಲಿ ಏಪ್ರಿಲ್‌ 19ರಂದು ಮತದಾನ ನಡೆಯಲಿದೆ.

ಯಾವ ರಾಜ್ಯದಲ್ಲಿ ಎಷ್ಟು ಹಂತದಲ್ಲಿ ಚುನಾವಣೆ

ಒಂದು ಹಂತ: ಅರುಣಾಚಲ ಪ್ರದೇಶ, ಅಂಡಮಾನ್‌ ನಿಕೋಬಾರ್‌ ದ್ವೀಪ, ಆಂಧ್ರಪ್ರದೇಶ, ಚಂಡೀಗಢ, ದಿಯು-ದಮನ್‌ ನಾಗರ & ಹವೇಲಿ, ಗೋವಾ, ಗುಜರಾತ್‌, ಹಿಮಾಚಲ ಪ್ರದೇಶ, ಹರಿಯಾಣ, ಕೇರಳ, ಲಕ್ಷದ್ವೀಪ, ಲಡಾಕ್‌, ಮಿಜೀರಾಂ, ಮೇಘಾಲಯ, ನಾಗಾಲ್ಯಾಂಡ್‌, ಪುದುಚೇರಿ, ಸಿಕ್ಕಿಂ, ತಮಿಳುನಾಡು, ಪಂಜಾಬ್, ತೆಲಂಗಾಣ ಹಾಗೂ ಉತ್ತರಾಖಂಡ

ಎರಡು ಹಂತ: ಕರ್ನಾಟಕ, ರಾಜಸ್ಥಾನ, ತ್ರಿಪುರಾ, ಮಣಿಪುರ

ಮೂರು ಹಂತ: ಛತ್ತೀಸ್‌ಗಢ, ಅಸ್ಸಾಂ

ನಾಲ್ಕು ಹಂತ: ಒಡಿಶಾ, ಮಧ್ಯಪ್ರದೇಶ, ಜಾರ್ಖಂಡ್‌

ಐದು ಹಂತ: ಮಹಾರಾಷ್ಟ್ರ, ಜಮ್ಮು-ಕಾಶ್ಮೀರ

ಏಳು ಹಂತ: ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಬಿಹಾರ

26 ವಿಧಾನಸಭೆ ಕ್ಷೇತ್ರಗಳಲ್ಲಿ ಉಪಚುನಾವಣೆ

ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಬಾಕಿ ಉಳಿದಿರುವ 26 ವಿಧಾನಸಭೆ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಸಲಾಗುವುದು ಎಂದು ರಾಜೀವ್‌ ಕುಮಾರ್‌ ಮಾಹಿತಿ ನೀಡಿದರು.

97 ಕೋಟಿ ನೋಂದಣಿ ಮಾಡಿಕೊಂಡ ಮತದಾರರು

97 ಕೋಟಿ ಮತದಾರರು ಈ ನೋಂದಣಿ ಮಾಡಿಕೊಂಡಿದ್ದಾರೆ. 10.5 ಲಕ್ಷ ಮತಗಟ್ಟೆಗಳನ್ನು ರಚಿಸಲಾಗುತ್ತದೆ. 55 ಲಕ್ಷ ಮತಯಂತ್ರಗಳನ್ನು ಚುನಾವಣೆಗಾಗಿ ಬಳಸಿಕೊಳ್ಳುತ್ತೇವೆ. ಇದುವರೆಗೆ 100 ಅಧಿಕ ವಿಧಾನಸಭೆ ಚುನಾವಣೆಗಳನ್ನು ಯಶಸ್ವಿಯಾಗಿ ಆಯೋಜಿಸಿದ ಕೀರ್ತಿ ಚುನಾವಣಾ ಆಯೋಗದ್ದಾಗಿದೆ. ಈ ಬಾರಿ 18-19 ವರ್ಷದ 1.89 ಕೋಟಿ ಮತದಾರರು ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. 85 ವರ್ಷ ದಾಟಿದವರು ಮನೆಯಿಂದಲೇ ಮತದಾನ ಮಾಡಲಿದ್ದಾರೆ. ವಿಶೇಷ ಚೇತನರಿಗೂ ಕೂಡ ಮನೆಯಿಂದಲೇ ಮತದಾನ ಮಾಡಬಹುದಾಗಿದೆ ಎಂದು ರಾಜೀವ್‌ ಕುಮಾರ್‌ ಮಾಹಿತಿ ನೀಡಿದರು.

ಪಾರದರ್ಶಕ ಚುನಾವಣೆ

ಚುನಾವಣೆ ಆಯೋಗವು ಪಾರದರ್ಶಕವಾಗಿ, ಸುಸಜ್ಜಿತವಾಗಿ ನಡೆಸಲು ಚುನಾವಣೆ ಆಯೋಗವು ಬದ್ಧವಾಗಿದೆ. ಇದಕ್ಕಾಗಿ, ದೇಶಾದ್ಯಂತ ಚುನಾವಣಾ ಆಯೋಗದ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು ಸೇರಿ ಪ್ರಮುಖರೊಂದಿಗೆ ಮಾತುಕತೆ ನಡೆಸಿದ್ದಾರೆ. ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆಯನ್ನು ನಡೆಸುತ್ತೇವೆ ಎಂದು ರಾಜೀವ್‌ ಕುಮಾರ್‌ ಮಾಹಿತಿ ನೀಡಿದರು.

ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳು ಈಗಾಗಲೇ 543 ಲೋಕಸಭಾ ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳನ್ನು ಘೋಷಿಸಲು ಪ್ರಾರಂಭಿಸಿವೆ. ಲೋಕಸಭಾ ಚುನಾವಣೆಗೆ ಬಿಜೆಪಿ ಇದುವರೆಗೆ 267 ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದರೆ, ಕಾಂಗ್ರೆಸ್ ಎರಡು ಪಟ್ಟಿಗಳಲ್ಲಿ 82 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.

ಇದನ್ನೂ ಓದಿ: Modi Road Show: ಮೋದಿ ರೋಡ್‌ ಶೋಗೆ ಕೋರ್ಟ್‌ ಅಸ್ತು; ತಮಿಳುನಾಡು ಸರ್ಕಾರಕ್ಕೆ ಮುಖಭಂಗ

2014ರ ಲೋಕಸಭೆ ಚುನಾವಣೆಯು 9 ಹಂತಗಳಲ್ಲಿ ನಡೆದಿತ್ತು. ಮೇ 16ರಂದು ಚುನಾವಣೆ ಫಲಿತಾಂಶ ಪ್ರಕಟವಾಗಿತ್ತು. ಮಾರ್ಚ್‌ 5ರಂದು ಚುನಾವಣೆ ಆಯೋಗವು ಚುನಾವಣೆ ದಿನಾಂಕ ಘೋಷಣೆ ಮಾಡಿತ್ತು. ಇನ್ನು, 2019ರಲ್ಲಿ 7 ಹಂತಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಏಪ್ರಿಲ್‌ 11ರಿಂದ ಮೇ 19ರ ಅವಧಿಯಲ್ಲಿ ಮತದಾನ ನಡೆದಿತ್ತು. ಮೇ 23ರಂದು ಫಲಿತಾಂಶ ಪ್ರಕಟವಾಗಿತ್ತ. ಚುನಾವಣೆ ಆಯೋಗವು ಮಾರ್ಚ್‌ 10ರಂದು ಚುನಾವಣೆ ದಿನಾಂಕ ಘೋಷಣೆ ಮಾಡಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version