Site icon Vistara News

Election Commission | ಗುಜರಾತ್‌ ಚುನಾವಣೆ ದಿನಾಂಕ ಘೋಷಣೆ ಏಕಿಲ್ಲ? ನಿಯಮ ಉಲ್ಲಂಘಿಸಿತೇ ಆಯೋಗ?

Rajiv Kumar

ನವದೆಹಲಿ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಘೋಷಿಸಿದ ಚುನಾವಣೆ ಆಯೋಗವು (Election Commission), ಗುಜರಾತ್‌ ಎಲೆಕ್ಷನ್‌ ದಿನಾಂಕ ಘೋಷಿಸಿಲ್ಲ. ಗುರುವಾರವೇ ಎರಡೂ ರಾಜ್ಯಗಳ ಮತದಾನ ದಿನಾಂಕ ಘೋಷಣೆ ಮಾಡುವ ನಿರೀಕ್ಷೆ ಇತ್ತು. ಆದರೆ, ಗುಜರಾತ್‌ ಎಲೆಕ್ಷನ್‌ ದಿನಾಂಕ ಘೋಷಿಸದೆ ಚುನಾವಣೆ ಆಯೋಗವು ಅಚ್ಚರಿ ಮೂಡಿಸಿದೆ. ಹಾಗೆಯೇ, ಆಯೋಗವು ನಿಯಮ ಉಲ್ಲಂಘಿಸಿದೆಯೇ ಎಂಬ ಪ್ರಶ್ನೆಗಳು ಮೂಡಿವೆ.

ಸಾಮಾನ್ಯವಾಗಿ ಎರಡು ರಾಜ್ಯಗಳ ವಿಧಾನಸಭೆ ಅವಧಿಯು ಆರು ತಿಂಗಳೊಳಗೆ ಮುಗಿಯುತ್ತಿದ್ದರೆ, ಆಯೋಗವು ಏಕಕಾಲಕ್ಕೆ ದಿನಾಂಕ ಘೋಷಿಸುತ್ತದೆ. ಆಯಾ ರಾಜ್ಯಗಳಲ್ಲಿ ಬೇರೆ ಬೇರೆ ಹಂತದಲ್ಲಿ ಚುನಾವಣೆ ನಡೆದರೆ ಕೆಲವು ದಿನಗಳ ವ್ಯತ್ಯಾಸವಾಗುತ್ತದೆ. ಆದರೆ, ಫಲಿತಾಂಶ ಮಾತ್ರ ಒಂದೇ ದಿನ ಪ್ರಕಟಿಸಲಾಗುತ್ತದೆ. ಅದರಲ್ಲೂ, ಮೊದಲಿನಿಂದಲೂ ಹಿಮಾಚಲ ಪ್ರದೇಶ ಹಾಗೂ ಗುಜರಾತ್‌ ವಿಧಾನಸಭೆ ಚುನಾವಣೆ ದಿನಾಂಕವನ್ನು ಸಾಮಾನ್ಯವಾಗಿ ಏಕಕಾಲಕ್ಕೆ ಘೋಷಿಸಲಾಗುತ್ತಿತ್ತು. ಫಲಿತಾಂಶವೂ ಒಂದೇ ದಿನ ಪ್ರಕಟವಾಗುತ್ತಿತ್ತು. ಆದರೆ, ಈ ಬಾರಿ ಹಳೆಯ ಸಂಪ್ರದಾಯಕ್ಕೆ ಆಯೋಗ ವಿದಾಯ ಹೇಳಿದೆ.

ಆಯೋಗ ಹೇಳಿದ್ದೇನು?

ಗುಜರಾತ್‌ ಚುನಾವಣೆ ದಿನಾಂಕ ಘೋಷಣೆ ಮಾಡದೆಯೇ ನಿಯಮ ಉಲ್ಲಂಘಿಸಲಾಯಿತೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಆಯೋಗದ ಆಯುಕ್ತ ರಾಜೀವ್‌ ಕುಮಾರ್‌ ಸ್ಪಷ್ಟನೆ ನೀಡಿದ್ದಾರೆ. “ಚುನಾವಣೆ ಆಯೋಗವು ಯಾವುದೇ ನಿಯಮ ಉಲ್ಲಂಘಿಸಿಲ್ಲ. ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಅವಧಿ ಮುಗಿಯುವ ಅಂತರವು ೪೦ ದಿನ ಇದೆ. ಒಂದು ರಾಜ್ಯದ ಚುನಾವಣೆ ಫಲಿತಾಂಶ ಮತ್ತೊಂದು ರಾಜ್ಯದ ಚುನಾವಣೆ ಫಲಿತಾಂಶದ ಪರಿಣಾಮ ಬೀರುವುದರಿಂದ ೩೦ ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಫಲಿತಾಂಶ ಪ್ರಕಟಿಸುವ ಹಾಗಿಲ್ಲ. ಹಾಗಾಗಿ ಆಯೋಗವು ಯಾವುದೇ ನಿಯಮ ಉಲ್ಲಂಘಿಸಿಲ್ಲ. ಹವಾಮಾನ ಸೇರಿ ಹಲವು ಕಾರಣಗಳಿಂದಾಗಿ ಏಕಕಾಲಕ್ಕೆ ದಿನಾಂಕ ಘೋಷಿಸಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ | Election Commission | ಹಿಮಾಚಲ ಪ್ರದೇಶದಲ್ಲಿ ನ.12ರಂದು ವಿಧಾನಸಭೆ ಚುನಾವಣೆ, ಒಂದೇ ಹಂತದಲ್ಲಿ ಮತದಾನ

Exit mobile version