Site icon Vistara News

ಬಂಗಾಳ ಡಿಜಿಪಿ, 6 ರಾಜ್ಯಗಳ ಗೃಹ ಕಾರ್ಯದರ್ಶಿಗಳನ್ನು ವಜಾಗೊಳಿಸಿದ ಚುನಾವಣಾ ಆಯೋಗ

election commission

Election Commission Removes Home Secretaries of 6 States, Bengal DGP Ahead of Lok Sabha Polls

ನವದೆಹಲಿ: ದಕ್ಷ, ನ್ಯಾಯಸಮ್ಮತ ಹಾಗೂ ಪಾರದರ್ಶಕತೆಯಿಂದ ಲೋಕಸಭೆ ಚುನಾವಣೆ (Lok Sabha Election 2024) ನಡೆಸಲಾಗುವುದು ಎಂದು ಚುನಾವಣೆ ಆಯೋಗ (Election Commission) ಘೋಷಿಸಿದ ಬೆನ್ನಲ್ಲೇ ಅಧಿಕಾರಿಗಳ ವಿಷಯದಲ್ಲಿ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಪಶ್ಚಿಮ ಬಂಗಾಳದ ಪೊಲೀಸ್‌ ಮಹಾ ನಿರ್ದೇಶಕ (DGP) ಹಾಗೂ ಆರು ರಾಜ್ಯಗಳ ಗೃಹ ಕಾರ್ಯದರ್ಶಿಗಳನ್ನು (Home Secretaries) ಚುನಾವಣಾ ಆಯೋಗವು ಅಧಿಕಾರದಿಂದ ಕೆಳಗಿಳಿಸಿದೆ.

ಪಶ್ಚಿಮ ಬಂಗಾಳ ಡಿಜಿಪಿ ರಾಜೀವ್ ಕುಮಾರ್‌, ಗುಜರಾತ್‌, ಉತ್ತರ ಪ್ರದೇಶ, ಜಾರ್ಖಂಡ್‌, ಹಿಮಾಚಲ ಪ್ರದೇಶ, ಬಿಹಾರ ಹಾಗೂ ಉತ್ತರಾಖಂಡ ರಾಜ್ಯಗಳ ಗೃಹ ಕಾರ್ಯದರ್ಶಿಗಳನ್ನು ಚುನಾವಣಾ ಆಯೋಗವು ವಜಾಗೊಳಿಸಿದೆ. ಅಷ್ಟೇ ಅಲ್ಲ, ಹಿಮಾಚಲ ಪ್ರದೇಶ ಹಾಗೂ ಮಿಜೋರಾಂನ ಸಾಮಾನ್ಯ ಆಡಳಿತ ಇಲಾಖೆಯ ಕಾರ್ಯದರ್ಶಿಗಳನ್ನು ಕೂಡ ಪದಚ್ಯುತಗೊಳಿಸಿದೆ. ಪಶ್ಚಿಮ ಬಂಗಾಳ ಡಿಜಿಪಿ ರಾಜೀವ್‌ ಕುಮಾರ್‌ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಆಪ್ತರಾಗಿದ್ದರು ಎಂದು ಕೂಡ ತಿಳಿದುಬಂದಿದೆ.

ಬೃಹನ್‌ಮುಂಬೈ ನಗರ ಪಾಲಿಕೆಯ ಆಯುಕ್ತ ಇಕ್ಬಾಲ್‌ ಸಿಂಗ್‌ ಚಾಹಲ್‌, ಹೆಚ್ಚುವರಿ ಆಯುಕ್ತರು, ಉಪ ಆಯುಕ್ತರನ್ನು ಕೂಡ ತೆಗೆದುಹಾಕಿದೆ. ಅಧಿಕಾರಿಗಳು ತಮ್ಮ ಜಿಲ್ಲೆಗಳಲ್ಲಿ ಮೂರು ವರ್ಷ ಅಧಿಕಾರ ಸಲ್ಲಿಸಿದ್ದರೆ, ಅವರನ್ನು ಚುನಾವಣೆ ಕಾರ್ಯಕ್ಕೆ ನಿಯೋಜಿಸಬೇಕು. ಅವರನ್ನು ನಿಯಮಿತವಾಗಿ ವರ್ಗಾವಣೆ ಮಾಡಬೇಕು ಎಂದು ಇದಕ್ಕೂ ಮೊದಲು ಚುನಾವಣೆ ಆಯೋಗವು ಆಯಾ ರಾಜ್ಯ ಸರ್ಕಾರಗಳಿಗೆ ಸೂಚಿಸಿತ್ತು. ಈ ಆದೇಶಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಪದಚ್ಯುತಿಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Air India: 180 ಉದ್ಯೋಗಿಗಳನ್ನು ವಜಾಗೊಳಿಸಿದ ಏರ್‌ ಇಂಡಿಯಾ; ನೀಡಿದ ಕಾರಣ ಇಲ್ಲಿವೆ

ಕೆಲ ನಗರ ಪಾಲಿಕೆಗಳ ಆಯುಕ್ತರು, ಉಪ ಆಯುಕ್ತರನ್ನು ಕೂಡ ವರ್ಗಾಯಿಸಬೇಕು ಎಂದು ಕೂಡ ಚುನಾವಣಾ ಆಯೋಗವು ನಿರ್ದೇಶನ ನೀಡಿತ್ತು. ಆದರೆ, ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ನ್ಯಾಯಸಮ್ಮತವಾಗಿ ಚುನಾವಣೆ ನಡೆಸಲು ಆಯೋಗ ತೀರ್ಮಾನಿಸಲಾಗಿದೆ. ಹಣಬಲ, ತೋಳ್ಬಲ, ಅಧಿಕಾರದ ಬಲವನ್ನು ನಿಯಂತ್ರಿಸಲು ಚುನಾವಣೆ ಆಯೋಗ ಸಜ್ಜಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಹೇಳಿದ್ದರು. ಇದರ ಬೆನ್ನಲ್ಲೇ, ಅವರು ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version